ಬೆಂಗಳೂರು : ಪದ್ಮಶ್ರೀ ಪುರಸ್ಕೃತ ಕವಿ, ವಿಧಾನ ಪರಿಷತ್ ಮಾಜಿ ಸದಸ್ಯ ದೊಡ್ಡರಂಗೇ ಗೌಡ ಅವರು ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯವರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದರು. ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ಪ್ರವಾಸ ಕಥನ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರ ಪ್ರಮುಖ ಕೃತಿಗಳೆಂದರೆ ಅನನ್ಯನಾಡು , ಪಿರಮಿಡ್ಡುಗಳ ಪರಿಸರದಲ್ಲಿ (ಪ್ರವಾಸ ಕಥನ), ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ (ಭಕ್ತಿಗೀತೆಯ ಕೃತಿ), ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ (ಗದ್ಯ ಕೃತಿ) ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ (ಕಾವ್ಯ),ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ (ರೂಪಕ) ಮುಂತಾದವು.
ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇವರು ಸಿನಿಮಾ ಸಂಭಾಷಣೆ ಹಾಗೂ ಚಲನಚಿತ್ರಗೀತೆಗಳನ್ನು ಬರೆದಿದ್ದಾರೆ. ಜನುಮದ ಜೋಡಿ, ಅಶ್ವಮೇಧ, ಬಂಗಾರದ ಜಿಂಕೆ ಮುಂತಾದ ಸಿನಿಮಾಗಳಿಗೂ ಗೀತೆ ರಚನೆ ಮಾಡಿದ್ದಾರೆ. 2008 ರಿಂದ 2014ರವರೆಗೆ ಇವರು ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಇನ್ನು ಇವರು 2021ರಲ್ಲಿ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ