ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈತ್ತೀಚಿಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ವಿಕಾಸಕುಮಾರ ವಿಕಾಸ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಮಂಗಳವಾರ ವಜಾಗೊಳಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.
ವಿಕಾಸಕುಮಾರ ವಿಕಾಸ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳೂ ಒಳಗೊಂಡು ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೂನ್ 5ರಂದು ರಾಜ್ಯ ಸರ್ಕಾರ ಅಮಾನತು ಮಾಡಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯರಾದ ನಿವೃತ್ತ ನ್ಯಾಯಮೂರ್ತಿ ಬಿ ಕೆ ಶ್ರೀವಾಸ್ತವ ಮತ್ತು ಆಡಳಿತಾತ್ಮಕ ಸದಸ್ಯರಾದ ಸಂತೋಷ ಮೆಹ್ರಾ ಅವರ ವಿಭಾಗೀಯ ಪೀಠವು ಬದಿಗೆ ಸರಿಸಿದೆ.
ಆರ್ಸಿಬಿ ವಿಜಯೋತ್ಸವದ ವೇಳೆ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರದ ಬಳಿಯ ಜನಜಂಗುಳಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದರು ಹಾಗೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ರಾಜ್ಯ ಸರ್ಕಾರವು ಬೆಂಗಳೂರು ಜಿಲ್ಲಾಧಿಕಾರಿ ಜಿ ಜಗದೀಶ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ. ಹಾಗೂ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿದ್ದು, ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದೆ.
ಅಖಿಲ ಭಾರತ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969, ನಿಯಮ 3(1)(ಎ) ಅಡಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸಕುಮಾರ ವಿಕಾಸ, ಕೇಂದ್ರೀಯ ವಿಭಾಗದ ಡಿಸಿಪಿ ಶೇಖರ ಎಚ್ ತೆಕ್ಕಣ್ಣವರ್ ಅವರನ್ನು ಅಮಾನತು ಮಾಡಲಾಗಿತ್ತು.
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ಪ್ರಕ್ರಿಯೆ) ನಿಯಮಗಳು 1965, ನಿಯಮ 5ರ ಅಡಿ ಕಬ್ಬನ್ ಪಾರ್ಕ್ ಎಸಿಪಿ ಸಿ ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎ.ಕೆ.ಗಿರೀಶ ಕರ್ತವ್ಯ ಲೋಪದಿಂದ ಮೇಲ್ನೋಟಕ್ಕೆ ದುರ್ಘಟನೆ ಸಂಭವಿಸಿದೆ ಎಂದು ಸರ್ಕಾರವು ಅಮಾನತು ಮಾಡಿತ್ತು.
ವಿಕಾಸಕುಮಾರ ವಿಕಾಸ ಪರವಾಗಿ ಹಿರಿಯ ವಕೀಲ ಧ್ಯಾನ ಚಿನ್ನಪ್ಪ ವಾದಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ