ಚಿಕ್ಕಬಳ್ಳಾಪುರ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಯ ನಂತರ ಮತ್ತೊಂದು ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇಂದು, ಬುಧವಾರ (ಜುಲೈ ೨) ನಂದಿ ಗಿರಿಧಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಕರಣ ಮಾಡಲು ನಿರ್ಧರಿಸಲಾಯಿತು. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲು ಅನುಮೋದನೆ ನೀಡಲಾಯಿತು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಈಗಾಗಲೇ ಮರುನಾಮಕರಣ ಮಾಡಲಾಗಿದೆ. ಈಗ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಭಾಗ್ಯನಗರ ಎಂದು ಹೆಸರಿಡಬೇಕು ಎಂದು ಸ್ಥಳೀಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ, ಅನುಮೋದನೆ ನೀಡಿದ್ದು, ಬಾಗೇಪಲ್ಲಿ ಇನ್ಮುಂದೆ ’ಭಾಗ್ಯನಗರ’ ಎಂದು ಮರುನಾಮಕರಣಗೊಳ್ಳಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ