ಬೆಂಗಳೂರು : ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ವಿಕಾಸಕುಮಾರ ವಿಕಾಸ ಅವರನ್ನು ಅಮಾನತು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು (ಸಿಎಟಿ)ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಟಿ ಎಂ ನದಾಫ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದರು.
ಆಗ ಪೀಠವು ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿ, ಗುರುವಾರ (ಜುಲೈ ೩) ವಿಚಾರಣೆ ನಡೆಸುವುದಾಗಿ ತಿಳಿಸಿತು.
ಜೂನ್ 4ರಂದು ಪೊಲೀಸ್ ಮಹಾನಿರ್ದೇಶಕರ ವರದಿ ಆಧರಿಸಿ, ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆದಿದೆ. ಸಿಎಟಿಗೆ ಮುಚ್ಚಿದ ಲಕೋಟೆಯಲ್ಲಿ ನಡೆದ ಘಟನೆಯ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಅದನ್ನು ಪರಿಗಣಿಸದೇ ಸಿಎಟಿ ಆದೇಶ ಮಾಡಿದೆ. ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ನ್ಯಾಯಾಂಗ ತನಿಖಾ ಆಯೋಗ ರಚಿಸಿರುವುದನ್ನು ಸಿಎಟಿಯು ತಪ್ಪಾಗಿ ಅರ್ಥೈಸಿದ್ದು, ಸರ್ಕಾರವು ಕಾಲ್ತುಳಿತಕ್ಕೆ ಯಾರು ಕಾರಣ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂದು ಹೇಳಿದೆ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಸಿಎಟಿ ಆದೇಶಕ್ಕೆ ಅಡ್ವೊಕೇಟ್ ಜನರಲ್ ಆಕ್ಷೇಪ ವ್ಯಕ್ತಪಡಿಸಿದರು.
ಘಟನೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಕೇಂದ್ರ ಸರ್ಕಾರವು ವಿಕಾಸಕುಮಾರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದೆ. ಇದು ಸಿಎಟಿಯಲ್ಲಿ ತೀರ್ಪು ಕಾಯ್ದಿರಿಸಿದ ಬಳಿಕ ನಡೆದಿದ್ದು, ಅದನ್ನು ಮೆಮೊದ ಮೂಲಕ ಸಿಎಟಿ ಗಮನಕ್ಕೆ ತರಲಾಗಿತ್ತು. ಇದನ್ನೂ ಸಿಎಟಿಯು ಪರಿಗಣಿಸಿಲ್ಲ. ಈ ಹಂತದಲ್ಲಿ ಅಧಿಕಾರಿಗಳ ಅಮಾನತನ್ನು ತೆರವು ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಸಾಕ್ಷಿಗಳ ಪರಿಶೀಲನೆಗೆ ಸಮಸ್ಯೆ ಉಂಟು ಮಾಡಲಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅಧಿಕಾರಿಗಳನ್ನು ಸೇವೆಯಿಂದ ಹೊರಗಿಡುವುದು ಅಗತ್ಯವಾಗಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ