ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದ ವರ್ಗಗಳ ಸಂಘಟನೆಗೆ ಮುಂದಾಗಿದೆ. ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಿದ್ದು, ನಾಲ್ಕು ಮಂದಿ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 24 ಸದಸ್ಯರಿರುವ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಅಹಿಂದ ನಾಯಕನಾಗಿ ಯಶಸ್ವಿಯಾಗಿರುವ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳನ್ನು ಸಂಘಟಿಸಿದ ಅನುಭವವಿದೆ ಎಂಬ ದೃಷ್ಟಿಯಿಂದ ಅವರನ್ನು ಈ ಸಲಹಾ ಮಂಡಳಿಗೆ ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ. ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಲಾಗಿದ್ದು, ಇದಕ್ಕಾಗಿ ಅನುಭವಿ ಸಿದ್ದರಾಮಯ್ಯ ಅವರಿಗೆ ಮುಖ್ಯಸ್ಥರ ಹೊಣೆಗಾರಿಕೆ ನೀಡಲಾಗಿದೆ ಎನ್ನಲಾಗಿದೆ.
ರಾಜ್ಯದ ಕಾಂಗ್ರೆಸ್ ನಾಯಕರಾದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಕೂಡ ಈ ಮಂಡಳಿ ಸದಸ್ಯರಾಗಿದ್ದಾರೆ.
ಸಿದ್ದರಾಮಯ್ಯಗೆ ಏಕೆ ಮುಖ್ಯಸ್ಥರ ಹೊಣೆಗಾರಿಕೆ..?
ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಹಿಂದವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಹೀಗಾಗಿ ದೇಶದಲ್ಲಿ ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರಕ್ಕೆ ಸಲಹೆ ನೀಡುವ ಹೊಸ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸಮಿತಿ ಮಾಡಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಸಮಿತಿ ಸಲಹೆ ನೀಡಲಿದೆ.
ಜುಲೈ 15ಕ್ಕೆ ಮೊದಲ ಸಭೆ:
ಸಲಹಾ ಮಂಡಳಿಯ ಮೊದಲ ಸಭೆ ಸಭೆ ಕರ್ನಾಟಕದಲ್ಲೇ ನಡೆಯಲಿದ್ದು ಜು.15 ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ ಜೋಡೋ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸಂಚಾಲಕರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಸೇರಿ ದೇಶದ ವಿವಿಧ ರಾಜ್ಯಗಳ 90 ಮಂದಿ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಲಹಾ ಮಂಡಳಿಗೆ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾರೆ. ಸಂಚಾಲಕರಾಗಿ ಡಾ.ಅನಿಲ್ ಜೈಹಿಂದ್, ಕಾರ್ಯದರ್ಶಿಯಾಗಿ ಜೀತೇಂದರ್ ಬಘೇಲ್ ಅವರನ್ನು ನೇಮಿಸಲಾಗಿದೆ. ಉಳಿದವರು ಸದಸ್ಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಕರ್ನಾಟಕದ ವೀರಪ್ಪ ಮೊಯ್ಲಿ, ರಾಜಸ್ಥಾನದ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಭೂಪೇಶ್ ಬಘೇಲ್, ವಿ. ನಾರಾಯಣಸ್ವಾಮಿ, ಸಚಿನ್ ಪೈಲಟ್, ಹರಿಪ್ರಸಾದ್ ಸೇರಿ 24 ಮಂದಿ ಸದಸ್ಯರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ