ಮಂಗಳೂರು : ಯುವಕನೊಬ್ಬ ಪ್ರೇಯಸಿಗೆ ಚಾಕುವಿನಿಂದ ಇರಿದು, ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ಫರಂಗಿಪೇಟೆ ನಿವಾಸಿ ದಿವ್ಯಾ ಅಲಿಯಾಸ್ ದೀಕ್ಷಿತಾ (26) ಹಾಗೂ ಕೋಡ್ಮನ್ ಗ್ರಾಮದ ನಿವಾಸಿ ಸುಧೀರ (30) ಎಂಬಾತ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಯಾವುದೋ ಕಾರಣಕ್ಕೆ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನಸ್ತಾಪ ಉಂಟಾಗಿದ್ದರೂ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದ ಎನ್ನಲಾಗಿದೆ.
ಸೋಮವಾರ (ಜುಲೈ 7) ಬೆಳಿಗ್ಗೆ ಆರೋಪಿ ಸುಧೀರ ಫರಂಗಿಪೇಟೆಯ ಸುಜೀರ್ ಮಲ್ಲಿ ಬಳಿ ದಿವ್ಯಾ ಅವರನ್ನು ಭೇಟಿಯಾಗಿದ್ದು, ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಂತರ ಕೋಪದ ಭರದಲ್ಲಿ ಸುಧೀರ ತಾನು ತಂದಿದ್ದ ಚಾಕುವಿನಿಂದ ದಿವ್ಯಾ ಅವರಿಗೆ ಇರಿದಿದ್ದಾನೆ ಎಂದು ಹೇಳಲಾಗಿದೆ.
ದಿವ್ಯಾ ಅವರು ಈತನಿಂದ ತಪ್ಪಿಸಿಕೊಂಡು ಓಡುವಾಗ ಕುಸಿದು ಬಿದ್ದಿದ್ದು, ಈಕೆ ಮೃತಪಟ್ಟಿದ್ದಾಳೆಂದು ಭಾವಿಸಿದ ಸುಧೀರ ಗಾಬರಿಗೊಂಡು ನಂತರ ದಿವ್ಯಾ ಅವರ ಬಾಡಿಗೆ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡ ದಿವ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ