ನವದೆಹಲಿ: ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ 10 ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಬುಧವಾರ ಜುಲೈ 9ರಂದು ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದೆ ಬ್ಯಾಂಕಿಂಗ್, ಅಂಚೆ ಸೇವೆಗಳು, ಗಣಿಗಾರಿಕೆ, ನಿರ್ಮಾಣ ವಲಯ ಮತ್ತು ಸಾರಿಗೆ ಮುಂತಾದ ವಲಯಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಜುಲೈ 9 ರ ಬುಧವಾರ ಭಾರತ ಬಂದ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ” ನೀತಿಗಳ ವಿರುದ್ಧ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳ ಜಂಟಿ ವೇದಿಕೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಸರಕಾರವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಮತ್ತು ಕೆಲಸದ ವಾತಾವರಣವನ್ನು ಹದಗೆಡಿಸುವ ಆರ್ಥಿಕ ಮತ್ತು ಕಾರ್ಮಿಕ ಸುಧಾರಣೆಗಳನ್ನು ಹೇರುತ್ತಿದೆ ಎಂದು ಒಕ್ಕೂಟಗಳು ಆರೋಪಿಸಿವೆ. “ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಪ್ರತಿಭಟನೆಯಲ್ಲಿ ಸೇರುತ್ತಾರೆ” ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಹೇಳಿದ್ದಾರೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು?
ಕಾರ್ಮಿಕರ ರಕ್ಷಣೆಗೆ ಹಾನಿ ಮಾಡುವ ಕಾರ್ಮಿಕ ನೀತಿಗಳನ್ನು ಕೈಬಿಡಬೇಕು
4 ನೂತನ ಕಾರ್ಮಿಕ ನೀತಿಗಳನ್ನು ಹಿಂಪಡೆಯಬೇಕು
ಸಾರ್ವಜನಿಕ ವಲಯದ ಸಂಸ್ಥೆಗಳ (PSU) ಖಾಸಗೀಕರಣ ಸ್ಥಗಿತಗೊಳಿಸಬೇಕು
ಕನಿಷ್ಠ ವೇತನ ಖಾತರಿ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡಬೇಕು
ಉದ್ಯೋಗಿಗಳನ್ನು ಕಾಯಂಗೊಳಿಸಬೇಕು
ಭಾರತೀಯ ಕಾರ್ಮಿಕ ಸಮ್ಮೇಳನದ ಪುನಃಸ್ಥಾಪನೆ
ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ನಾಗರಿಕ ಸೌಲಭ್ಯಗಳಲ್ಲಿ ಕಡಿತ ಮಾಡುವುದು ಬೇಡ, ಅವುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು
ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು
ವಲಸೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಿಲ್ಲಿಸಬೇಕು
ಸಾರ್ವಜನಿಕ ಭದ್ರತಾ ಮಸೂದೆಗಳನ್ನು ಬಳಸಿಕೊಂಡು ಪ್ರತಿಭಟನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಬೇಕು
ಕಾರ್ಮಿಕರ ಸಂಘಟಿತ ಮತ್ತು ಮುಷ್ಕರ ಮಾಡುವ ಹಕ್ಕನ್ನು ಪುನಃಸ್ಥಾಪಿಸಬೇಕು.
ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ, ವಿಶೇಷವಾಗಿ ಯುವಕರಿಗೆ (ಭಾರತದ ಜನಸಂಖ್ಯೆಯ 65% ಇರುವ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು).
ಸರ್ಕಾರಿ ಖಾಲಿ ಹುದ್ದೆಗಳನ್ನು ಹೊಸ ನೇಮಕಾತಿಗಳೊಂದಿಗೆ ಭರ್ತಿ ಮಾಡಬೇಕು
ಮನ್ರೇಗಾ (MGNREGA) ವೇತನವನ್ನು ಹೆಚ್ಚಿಸಬೇಕು ಮತ್ತು ಅದನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು
ಭಾರತ ಬಂದ್‌ನಲ್ಲಿ ಯಾವ್ಯಾವ ಕಾರ್ಮಿಕ ಸಂಘಟನೆಗಳು ಭಾಗವಹಿಸುತ್ತಿವೆ?
ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ ಕಾರ್ಮಿಕರು ಹಾಗೂ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಭಾಗವಹಿಸುವ ಸಂಘಟನೆಗಳು ಇಂತಿವೆ:
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
ಹಿಂದ್ ಮಜ್ದೂರ್ ಸಭಾ (HMS).
ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA).
ಲೇಬರ್ ಪ್ರೋಗ್ರೆಸಿವ್ ಫೆಡರೇಶನ್ (LPF).
ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC).
ಈ ಸಂಘಟನೆಗಳಿಂದ ಬೆಂಬಲ…
ಸಂಯುಕ್ತ ಕಿಸಾನ್ ಮೋರ್ಚಾ
ಗ್ರಾಮೀಣ ಕಾರ್ಮಿಕರ ಸಂಘಗಳು.
ರೈಲ್ವೆ, ಎನ್‌ಎಂಡಿಸಿ (NMDC) ಲಿಮಿಟೆಡ್ ಮತ್ತು ಉಕ್ಕಿನ ಕೈಗಾರಿಕೆಗಳ ಸಾರ್ವಜನಿಕ ವಲಯದ ಸಿಬ್ಬಂದಿ
ಯಾವ ವಲಯಗಳ ಮೇಲೆ ಪರಿಣಾಮ ಬೀರಬಹುದು ?
ಭಾರತ್ ಬಂದ್ ವೇಳೆ ಭಾರತದಾದ್ಯಂತ ಹಲವಾರು ಸೇವೆಗಳಿಗೆ ತೊಂದರೆಯಾಗುವ ನಿರೀಕ್ಷೆಯಿದೆ, ವಿಶೇಷವಾಗಿ
ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳು, ಅಂಚೆ ಕಾರ್ಯಾಚರಣೆಗಳು, ಕಲ್ಲಿದ್ದಲು ಗಣಿಗಾರಿಕೆ, ಸರ್ಕಾರಿ-ಚಾಲಿತ ಸಾರ್ವಜನಿಕ ಸಾರಿಗೆ
ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು ಮತ್ತು ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದೆʼʼ ಎಂದು ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಧು ತಿಳಿಸಿದ್ದಾರೆ. ಹಾಗೂ ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಹೆಚ್ಚು ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದೆ.
ಯಾವುದಕ್ಕೆ ತೊಂದರೆಯಾಗುವುದಿಲ್ಲ..?
ಶಾಲೆಗಳು ಮತ್ತು ಕಾಲೇಜುಗಳು, ರೈಲ್ವೆ, ಆರೋಗ್ಯ ಸೇವೆಗಳು, ಖಾಸಗಿ ಕಚೇರಿಗಳು, ಐಟಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬ್ಯಾಂಕ್‌ನ ಡಿಜಿಟಲ್ ಸೇವೆಗಳು ಮತ್ತು ಯುಪಿಐ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ