ಮೋದಿ, ಆರ್‌ಎಸ್‌ಎಸ್‌ ನ ‘ಅವಹೇಳನಕಾರಿ’ ವ್ಯಂಗ್ಯಚಿತ್ರ : ಕಾರ್ಟೂನಿಸ್ಟ್‌ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್‌

ಭೋಪಾಲ :ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಇಂದೋರ್ ಮೂಲದ ವ್ಯಂಗ್ಯಚಿತ್ರಕಾರ ಹೇಮಂತ ಮಾಳವೀಯ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಮಾಳವೀಯ ಅವರ ವ್ಯಂಗ್ಯಚಿತ್ರವು “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ಮೀರಿದೆ” ಎಂದು ಅದು ಹೇಳಿದೆ. ಮಾಳವೀಯ ಅವರು ವಾಕ್ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡಿದ್ದು ಚಿತ್ರ ಬರೆಯುವಾಗ ವಿವೇಚನೆ ಬಳಸಬೇಕಿತ್ತು ಎಂದು ನ್ಯಾಯಮೂರ್ತಿ ಸುಬೋಧ ಅಭ್ಯಂಕರ ಅವರು ಜುಲೈ 3ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಿದ್ದಾರೆ. ವ್ಯಂಗ್ಯಚಿತ್ರಕಾರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಮೀರಿದ್ದು ಅವರ ಕಸ್ಟಡಿ ವಿಚಾರಣೆ ಅಗತ್ಯ ಎಂದು ಹೇಳಿದರು.

ವ್ಯಂಗ್ಯಚಿತ್ರದಲ್ಲಿ ದೇಶದ ಪ್ರಧಾನಿ ಜೊತೆ ಆರ್‌ ಎಸ್‌ಎಸ್‌ ಸಂಘಟನೆಯನ್ನು ಚಿತ್ರಿಸಿರುವ ಅರ್ಜಿದಾರರ ನಡೆ ಮತ್ತು ಅದಕ್ಕೆ ನೀಡಲಾಗಿರುವ ಟಿಪ್ಪಣಿಯಲ್ಲಿ ಹಿಂದೂಗಳ ದೇವರಾದ ಶಿವನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿರುವುದು ಸಂವಿಧಾನದ 19(1) (ಎ) ವಿಧಿಯಡಿಯಲ್ಲಿ ಪ್ರತಿಪಾದಿಸಲಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಪೂರ್ಣ ದುರುಪಯೋಗವಾಗಿದೆ. ಇದು ದೂರುದಾರರು ವಾದಿಸಿದಂತೆ ಅಪರಾಧದ ವ್ಯಾಖ್ಯೆಯಡಿ ಬರುತ್ತದೆ ಎಂದು ಏಕಸದಸ್ಯ ಪೀಠ ಹೇಳಿದೆ. ಶಿವನನ್ನು ಕುರಿತ ಅವಹೇಳನಕಾರಿ ಸಾಲುಗಳಿರುವುದರಿಂದ ವ್ಯಂಗ್ಯಚಿತ್ರ ಇನ್ನಷ್ಟು ವಿಚಲಿತಗೊಳಿಸುತ್ತದೆ. ವ್ಯಂಗ್ಯಚಿತ್ರವನ್ನು ಬಳಸಲು ಅವರು ಬೇರೆಯವರನ್ನು ಪ್ರಚೋದಿಸಿರುವುದರಿಂದ ಇದು ಸದಭಿರುಚಿಯಿಂದಾಗಲಿ ಅಥವಾ ಉತ್ತಮ ಆಶಯದಿಂದ ರೂಪಿತಗೊಂಡಿದೆ ಎನಿಸದು ಎಂದು  ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ಬಾಲಕಿಗೆ ಝಡ್‌+ ಭದ್ರತೆ : ಪುಟ್ಟ ಹುಡುಗಿ ಶಾಲಾ ಬಸ್ಸಿನಿಂದ ಇಳಿದ ಕೂಡಲೇ ಮನೆಗೆ ಕರೆದೊಯ್ಯುವ ನಾಯಿಗಳ ಹಿಂಡು | ವೀಕ್ಷಿಸಿ

ಅರ್ಜಿದಾರರ ಕೃತ್ಯ ದುರುದ್ದೇಶದಿಂದ ಕೂಡಿದ್ದು, ದೂರುದಾರರು ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ. ಮಾಳವೀಯಾ ಅಪರಾಧ ಎಸಗುವ ಮತ್ತು ಭವಿಷ್ಯದಲ್ಲಿ ಅದನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ. ಆದ್ದರಿಂದ ಅವರು ಕಾನೂನು ರಕ್ಷಣೆಗಳಿಗೆ ಅರ್ಹರಲ್ಲ ಎಂದು ಪೀಠ ತಿಳಿಸಿದೆ,
ಮನಸೋ ಇಚ್ಛೆಯ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ಮಾರ್ಗದರ್ಶನವನ್ನು ಪಾಲಿಸುತ್ತಿಲ್ಲ ಎಂಬ ಮಾಳವೀಯಾ ಪರ ವಕೀಲರ ವಾದವನ್ನು ಒಪ್ಪದ ನ್ಯಾಯಾಲಯ ಅರ್ನೇಶಕುಮಾರ ಪ್ರಕರಣದಲ್ಲಿ ನೀಡಿದ್ದ ಮಾರ್ಗಸೂಚಿ ಈ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement