ಬೆಂಗಳೂರು : ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ಕಾಲೇಜು ಉಪನ್ಯಾಸಕರು ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಉಪನ್ಯಾಸಕರಿಂದ ಬೆದರಿಕೆ ಹಾಗೂ ಬ್ಲ್ಯಾಕ್ ಮೇಲ್ ಹೆಚ್ಚಾದಾಗ ಸಂಕಷ್ಟ ತಾಳಲಾರದೆ ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರು ಮಗಳನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಮಹಿಳಾ ಆಯೋಗದ ಮೂಲಕ ಪೊಲೀಸ್ ದೂರು ದಾಖಲಿಸಲಾಗಿದೆ.
ಪೊಲೀಸರು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರನ್ನು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.
ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ಆತ್ಮೀಯತೆ ಬೆಳೆದಿತ್ತು. ಬಳಿಕ ವಾಟ್ಸಾಪ್‌ನಲ್ಲಿ ಚಾಟ್ ಮಾಡುತ್ತಿದ್ದ. ವಿದ್ಯಾರ್ಥಿನಿ ಉಪನ್ಯಾಸಕನಿಂದ ನೋಟ್ಸ್ ಪಡೆಯುತ್ತಿದ್ದಳು. ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು, ನೋಟ್ಸ್ ನೀಡುವುದನ್ನು ಈತ ಮುಂದುವರಿಸಿದ್ದ. ನೋಟ್ಸ್ ಕೊಡುವ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮಿಗೆ ಬರುವಂತೆ ತಿಳಿಸಿದ್ದ. ಅಲ್ಲಿ ಅತ್ಯಾಚಾರ ಎಸಗಿ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಉಪನ್ಯಾಸಕ ನರೇಂದ್ರ ದುಷ್ಕೃತ್ಯ ಎಸಗಿದ ಬಳಿಕ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಸಂದೀಪ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ “ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವೀಡಿಯೊ ನನ್ನ ಬಳಿ ಇದೆ. ತನ್ನೊಂದಿಗೆ ಸಹಕರಿಸದಿದ್ದರೆ ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಅತ್ಯಾಚಾರ ಎಸಗಿದ ರೂಮು ಇವರ ಗೆಳೆಯ ಅನೂಪ್ ಎಂಬಾತನದ್ದಾಗಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, “ನೀನು ನನ್ನ ರೂಮಿಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಬೆದರಿಕೆ ಹಾಕಿ ಆತನೂ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯನ್ನ ಕೌನ್ಸೆಲಿಂಗ್ ನಡೆಸಿದ ಆಯೋಗವು ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿತ್ತು. ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ ಬಾನೋತ್ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ