ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ಸಿದ್ದರಾಮಯ್ಯ ಅವರ ಆಪ್ತ ಹಾಗೂ ಸಚಿವ ಬೈರತಿ ಸುರೇಶ್ ಅವರ ವಿರುದ್ಧದ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇ.ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ಪೀಠ ಇ.ಡಿ.ಯನ್ನು ಟೀಕಿಸಿದೆ. ರಾಜಕೀಯ ಸಮರಗಳನ್ನು ನ್ಯಾಯಾಲಯದ ಹೊರಗೆ ನಡೆಸಬೇಕು ಎಂದ ಮುಖ್ಯ ನ್ಯಾಯಮೂರ್ತಿಬಿ ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಕೆ ವಿನೋದಚಂದ್ರನ್ ಅವರಿದ್ದ ಪೀಠ ಹೇಳಿದೆ ಹಾಗೂ ಇಂತಹ ಕದನ ನಡೆಸಲು ಇ.ಡಿ.ಯನ್ನು ಯಾಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿತು.
ನನಗೆ ಮಹಾರಾಷ್ಟ್ರದಲ್ಲಿ ಇಂತಹ ಒಂದಿಷ್ಟು ಅನುಭವವಿದೆ. ದಯವಿಟ್ಟು ಟೀಕಿಸಲು ನಮ್ಮನ್ನು ಪ್ರೇರೇಪಣೆ ಮಾಡಬೇಡಿ. ಇಲ್ಲವಾದರೆ, ನಾವು ಜಾರಿ ನಿರ್ದೇಶನಾಲಯದ ಬಗ್ಗೆ ತುಂಬಾ ಕಠಿಣವಾಗಿ ಮಾತನಾಡಬೇಕಾಗುತ್ತದೆ. ರಾಜಕೀಯ ಹೋರಾಟಗಳು ಮತದಾರರ ಮುಂದೆ ನಡೆಯಲಿ. ಇದಕ್ಕಾಗಿ ನಿಮ್ಮನ್ನು (ಇ.ಡಿ.ಯನ್ನು) ಏಕೆ ಬಳಸಿಕೊಳ್ಳಲಾಗುತ್ತಿದೆ?” ಎಂದು ನ್ಯಾಯಾಲಯ ಕೇಳಿದೆ.
ನಂತರ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ತಾರ್ಕಿಕತೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿತು. ” ಏಕ ಸದಸ್ಯ ಪೀಠದ ತಾರ್ಕಿಕತೆಯಲ್ಲಿ ನಮಗೆ ಯಾವುದೇ ದೋಷ ಕಂಡುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ, ನಾವು ಅರ್ಜಿ ತಿರಸ್ಕರಿಸುತ್ತಿದ್ದೇವೆ ಎಂದು ಪೀಠ ಹೇಳಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ