ನವದೆಹಲಿ: ಕರ್ನಾಟಕದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಅಧಿಕ ರಸಗೊಬ್ಬರ ಪೂರೈಕೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸಂಸದರೆಲ್ಲ ಒಟ್ಟಾಗಿ ಸೇರಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರೈತರ ಹಿತದೃಷ್ಟಿಯಿಂದ ರಾಜ್ಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸುವಂತೆ ಮನವಿ ಸಲ್ಲಿಸಿದ್ದಾರೆ.
1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹ…
ರಾಜ್ಯದಲ್ಲಿ ರಸಗೊಬ್ಬರದ ಅಭಾವವಿಲ್ಲ. ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯ ಸರ್ಕಾರ ಸಂಗ್ರಹಣೆ ಮಾಡಿಟ್ಟುಕೊಂಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಮಾಹಿತಿ ನೀಡಿದರು. ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಅಭಾವ ಎದುರಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಪೂರೈಸಿದೆ. ಆದರೆ, ರಾಜ್ಯ ಸರ್ಕಾರ ಸರಿಯಾದ ಕ್ರಮದಲ್ಲಿ ಅದನ್ನು ಹಂಚಿಕೆ ಮಾಡಬೇಕಿದೆ ಅಷ್ಟೇ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಬದ್ಧವಾಗಿದೆ. ರೈತರಿಗೆ ಮತ್ತಷ್ಟು ಅಗತ್ಯ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜೋಶಿ ಭರವಸೆ ನೀಡಿದರು.
ಬೇಡಿಕೆ ಹೆಚ್ಚಿದೆ, ಹೆಚ್ಚು ಪೂರೈಸಿ…
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಎಲ್ಲೆಡೆ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಹಾಗಾಗಿ ರಸಗೊಬ್ಬರಕ್ಕೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಿ ಎಂದು ಪ್ರಹ್ಲಾದ ಜೋಶಿ ನೇತೃತ್ವದ ಸಂಸದರ ತಂಡ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಜೆಪಿ ನಡ್ಡಾ ಅವರಲ್ಲಿ ಮನವಿ ಮಾಡಿದೆ. ರೈತರಿಂದ ಬೇಡಿಕೆ ಹೆಚ್ಚಿದ ಕಾರಣ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡಬೇಕು ಎಂದು ಸಂಸದರ ತಂಡ ನಡ್ಡಾ ಅವರಿಗೆ ಮನವರಿಕೆ ಮಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ