ಉಡುಪಿ : ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ದೋಣಿ ಮಗುಚಿಬಿದ್ದ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದಲ್ಲಿ ನಡೆದಿದೆ. ಅದೃಷ್ಟವಶಾತ್ ಲೈಫ್ ಜಾಕೆಟ್ ಧರಿಸಿದ್ದರಿಂದ ಅದರಲ್ಲಿದ್ದ ಒಂಬತ್ತು ಮೀನುಗಾರರು ಪಾರಾಗಿದ್ದಾರೆ.
ಮೀನುಗಾರಿಕೆ ದೋಣಿಯಲ್ಲಿ ಒಂಬತ್ತು ಮೀನುಗಾರರು ಉಪ್ಪುಂದ ಗ್ರಾಮದ ಮಡಿಕಲ್ ಕಡಲ ತೀರದಿಂದ ಆಳ ಸಮುದ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿದ್ದರಿಂದ ದೋಣಿ ಮಗುಚಿ ಬಿದ್ದು ಅದರಲ್ಲಿದ್ದವರೆಲ್ಲ ಸಮುದ್ರಕ್ಕೆ ಬಿದ್ದರು. ಆದರೆ ಅವರೆಲ್ಲರೂ ಲೈಫ್ ಜಾಕೆಟ್ ಧರಿಸಿದ್ದರಿಂದ ನೀರಿನಲ್ಲಿ ಈಜುತ್ತಾ ಸುರಕ್ಷಿತವಾಗಿ ದಡ ಸೇರಿದರು.
ಉಪ್ಪುಂದ ಮಡಿಕಲ್ ತೀರದಿಂದ ಸುಮಾರು 10 ಮೈಲುಗಳಷ್ಟು ಸಾಗುವ ಹೊತ್ತಿನಲ್ಲಿ ಬೃಹತ್ ಅಲೆ ಅಪ್ಪಳಿಸಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಕೂಡಲೇಧಾವಿಸಿ ಹಗ್ಗ ಮತ್ತು ಮತ್ತೊಂದು ದೋಣಿಯ ಸಹಾಯದಿಂದ ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ಎಳೆದು ತಂದಿದ್ದಾರೆ.
ಬೃಹತ್ ಅಲೆಗಳ ರಭಸಕ್ಕೆ ದೋಣಿಯ ಇಂಜಿನ್ ಮತ್ತು ಅದರ ರಚನೆಗೆ ಹಾನಿಯಾಗಿದೆ. ದೋಣಿಯಲ್ಲಿದ್ದ ಮೀನುಗಾರಿಕೆ ಬಲೆಗಳು ಸಮುದ್ರ ಪಾಲಾಗಿದ್ದು, ಸುಮಾರು 5.5 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ