ಚಾಮರಾಜನಗರ : ಐದು ಹುಲಿಗಳಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿದ ಪ್ರಕರಣ ಜನಮಾನಸದಿಂದ ಮಾಸುವ ಮುನ್ನ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಎರಡು ಹುಲಿಮರಿಗಳು ಮೃತಪಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿವೆ.
ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟಿರುವುದು ಕಂಡುಬಂದಿದೆ. ಸುಮಾರು 20 ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಮತ್ತು ಗಂಡು ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟ ಕಾರಣದಿಂದ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಗಸ್ತು ತಿರುಗುವ ವೇಳೆಸಿಬ್ಬಂದಿಗೆ ಹುಲಿ ಮರಿಗಳ ಮೃತದೇಹ ಕಂಡುಬಂದಿದೆ. ನಂತರ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತಪಟ್ಟ ಹುಲಿ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟಿದ್ದು ಹಸಿವು, ನಿತ್ರಾಣದಿಂದ ಸಾವಿಗೀಡಾಗಿವೆ. ಎರಡು- ಮೂರು ದಿನಗಳ ಹಿಂದೆ ಅವು ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿ ಮರಿಗಳು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದರೂ, ನಿಖರ ಕಾರಣ ತಿಳಿಯಲು ಹುಲಿಗಳ ಅಂಗಾಂಗವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ