
ಹುಬ್ಬಳ್ಳಿ: 2025 ನೇ ಸಾಲಿನ ಗಣೇಶ ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 265 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಓಡಿಸಲಾಗುತ್ತಿದೆ.
ಆಗಸ್ಟ್ 22ರಂದು ಶುಕ್ರವಾರ, 23ರಂದು ಬೆನಕನ ಅಮವಾಸ್ಯೆ / ನಾಲ್ಕನೇ ಶನಿವಾರ, 24ರಂದು ಭಾನುವಾರ, 26ರಂದು ಸ್ವರ್ಣಗೌರಿ ವ್ರತ ಮತ್ತು 27ರಂದು ಗಣೇಶ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಬೆಂಗಳೂರಿನಿಂದ ರಾಜ್ಯ/ಅಂತಾರಾಜ್ಯ ವಿವಿಧ ಸ್ಥಳಗಳಿಗೆ ತೆರಳಲು ಆಗಸ್ಟ್ 22ರಿಂದ 26ರ ವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ನಂತರ ಆಗಸ್ಟ್ 27ಮತ್ತು ನಂತರ ದಿನಗಳಂದು ಪ್ರಮುಖ ಸ್ಥಳಗಳಿಗೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ.
ಸದರಿ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ, ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ