ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (Greater Bengaluru Authority) ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರಾಗಿ ಐದು ವಲಯದ ಮಹಾಪೌರರು, ಐದು ವಲಯದ ಆಯುಕ್ತರು, ಬೆಂಗಳೂರು ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಪ್ರಾಧಿಕಾರ ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಪದನಿಮಿತ್ತ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಪದನಿಮಿತ್ತ ಸದಸ್ಯರನ್ನಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಸಚಿವ ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಭೈರತಿ ಸುರೇಶ, ದಿನೇಶ ಗುಂಡೂರಾವ್, ಕೃಷ್ಣ ಬೈರೇಗೌಡ, ಸಚಿವ ಜಮೀರ್ ಅಹ್ಮದ್ ಖಾನ್, ಲೋಕಸಭಾ ಸದಸ್ಯ ಡಾ.ಸಿ.ಎನ್. ಮಂಜುನಾಥ, ಪಿ.ಸಿ. ಮೋಹನ, ತೇಜಸ್ವಿ ಸೂರ್ಯ, ರಾಜ್ಯ ಸಭಾ ಸದಸ್ಯರಾದ ನಾರಾಯಣ ಕೊರಗಪ್ಪ, ಜಗ್ಗೇಶ, ಜಿ.ಸಿ ಚಂದ್ರಶೇಖರ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಸೇರಿ 75 ಜನರನ್ನು ನೇಮಿಸಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ