ಬೆಂಗಳೂರು : ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ(ಡಿಜಿ-ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಅಲೋಕ ಮೋಹನ ಅವರ ನಿವೃತ್ತಿಯ ನಂತರ ಮೇ 21 ರಿಂದ ಪ್ರಭಾರಿ ಡಿಜಿಪಿಯ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದ ಡಾ. ಸಲೀಂ ಅವರನ್ನು ಆಗಸ್ಟ್ 30 ರ ಶನಿವಾರ ಅಧಿಕೃತ ಅಧಿಸೂಚನೆಯೊಂದಿಗೆ ಆ ಹುದ್ದೆಗೆ ನೇಮಕ ಮಾಡಲಾಗಿದೆ. ಡಾ.ಎಂ.ಎ.ಸಲೀಂ 1993ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ನಂತರ ಅವರನ್ನು ಡಿಜಿ-ಐಜಿಪಿಯಾಗಿ ನೇಮಿಸಿ ಶನಿವಾರ(ಆಗಸ್ಟ್ 30)ದಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ ಅಧಿಸೂಚನೆ ಹೊರಡಿಸಿದ್ದಾರೆ.
ಅಪರಾಧ ತನಿಖಾ ವಿಭಾಗ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯಾಗಿರುವ ಡಾ.ಎಂ.ಎ.ಸಲೀಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಮಹಾ ನಿರ್ದೇಶಕರಾಗಿ (ಪೊಲೀಸ್ ಪಡೆ ಮುಖ್ಯಸ್ಥರು) ನೇಮಕ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ