ಹೈದರಾಬಾದ್ : ತಮ್ಮ ಪುತ್ರಿ ಹಾಗೂ ತೆಲಂಗಾಣ ಶಾಸಕಿ ಕೆ. ಕವಿತಾ ಅವರನ್ನು ಬಿಆರ್ಎಸ್ ಅಧ್ಯಕ್ಷ -ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಭಾರತ ರಾಷ್ಟ್ರ ಸಮಿತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ, ಅವರ ಸೋದರಸಂಬಂಧಿಗಳಾದ ಮಾಜಿ ನೀರಾವರಿ ಸಚಿವ ಟಿ. ಹರೀಶ ರಾವ್ ಮತ್ತು ಮಾಜಿ ಸಂಸದ ಜೆ. ಸಂತೋಷ ರಾವ್ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ ಒಂದು ದಿನದ ನಂತರ ಕವಿತಾ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಹೇಳಿಕೆಗಳಲ್ಲಿ, ಕವಿತಾ ತಮ್ಮ ಸೋದರಸಂಬಂಧಿಗಳು ತಮ್ಮ ತಂದೆ ಮತ್ತು ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ
ತನ್ನ ಸೋದರಸಂಬಂಧಿ ಮತ್ತು ಬಿಆರ್ಎಸ್ ನಾಯಕರಾದ ಟಿ. ಹರೀಶ ರಾವ್ ಮತ್ತು ಜೆ. ಸಂತೋಷಕುಮಾರ ತಮ್ಮ ತಂದೆ ಕೆ.ಚಂದ್ರಶೇಖರ ರಾವ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕವಿತಾ ಆರೋಪಿಸಿದ್ದರು. ಅದರ ಬೆನ್ನಲ್ಲೇ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಕವಿತಾ ಅವರನ್ನು ಬಿಆರ್ಎಸ್ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಕೆ. ಚಂದ್ರಶೇಖರ ರಾವ್ ತೆಗೆದುಕೊಂಡಿದ್ದಾರೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. ಕವಿತಾ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಚಟುವಟಿಕೆಗಳು ಬಿಆರ್ಎಸ್ ಪಕ್ಷದ ನೀತಿಗಳು ಮತ್ತು ತತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕವಿತಾ ಅವರನ್ನು ಅಮಾನತುಗೊಳಿಸುವ ಕೇವಲ ಒಂದು ದಿನ ಮೊದಲು, ಅವರು ಪಕ್ಷದ ಸಹೋದ್ಯೋಗಿಗಳು ಕೆ. ಚಂದ್ರಶೇಖರ ರಾವ್ ಅವರ ಇಮೇಜ್ಗೆ ಹಾನಿ ಮಾಡಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸುವ ಮೂಲಕ ಬಿಆರ್ಎಸ್ನಲ್ಲಿ ಬಿರುಗಾಳಿ ಎಬ್ಬಿಸಿದ್ದರು.
ಹಿರಿಯ ನಾಯಕ ಟಿ ಹರೀಶ್ ರಾವ್ ಮತ್ತು ಮಾಜಿ ಸಂಸದರಾದ ಮೇಘಾ ಕೃಷ್ಣ ರೆಡ್ಡಿ ಅವರು ತಮ್ಮ ತಂದೆಗೆ “ಭ್ರಷ್ಟಾಚಾರದ ಹಣೆಪಟ್ಟಿ” ಅಂಟಿಸಿದ್ದಾರೆ. ಮತ್ತು ಹರೀಶ ರಾವ್ ಮತ್ತು ಸಂತೋಷಕುಮಾರ ಅವರು ತಮ್ಮನ್ನು ಕಡೆಗಣಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಆಗಸ್ಟ್ 22 ರಂದು, ಕವಿತಾ ಅವರನ್ನು ತೆಲಂಗಾಣ ಬೊಗ್ಗು ಘನಿ ಕಾರ್ಮಿಕ ಸಂಘದ (ಟಿಬಿಜಿಕೆಎಸ್) ಗೌರವ ಅಧ್ಯಕ್ಷೆ ಸ್ಥಾನದಿಂದ ಹಠಾತ್ತನೆ ಕಿತ್ತುಹಾಕಲಾಗಿತ್ತು. ನಂತರ ಅವರು ಪಕ್ಷದ ಒಳಗಿನವರು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು ಮತ್ತು ತಮ್ಮಉಚ್ಚಾಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಅವರು ಹೇಳಿದರು.
ಚುನಾವಣೆ ರಾಜಕೀಯ ಪ್ರೇರಿತವಾಗಿದೆ, ತಮಗೆ ಗೊತ್ತಿಲ್ಲದೆ ಪಕ್ಷದ ಕಚೇರಿಯಲ್ಲಿ ನಡೆಸಲಾಗಿದೆ ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದರು. “ಪಕ್ಷದ ಆಂತರಿಕ ಕಾರ್ಯಚಟುವಟಿಕೆಯನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ದ್ವೇಷ ಸಾಧಿಸಲಾಯಿತು” ಎಂದು ಅವರು ಹೇಳಿದರು.
ಬಿಆರ್ಎಸ್ನ ಬೆಳ್ಳಿ ಮಹೋತ್ಸವ ಸಭೆಯ ನಂತರ ತನ್ನ ತಂದೆಗೆ ಬರೆದಿದ್ದ ಸೋರಿಕೆಯಾದ ಪತ್ರವನ್ನು ತನ್ನ ವಿರುದ್ಧದ ದ್ವೇಷಕ್ಕೆ ಪುರಾವೆಯಾಗಿ ಅವರು ತೋರಿಸಿದರು. ಅದನ್ನು ಸೋರಿಕೆ ಮಾಡಿದವರು ಯಾರು ಎಂದು ಅವರು ಸಾರ್ವಜನಿಕವಾಗಿ ಪ್ರಶ್ನಿಸಿದರು ಮತ್ತು ಒಳಗಿನವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. “ನಾನು ನೂರಾರು ಪತ್ರಗಳನ್ನು ಬರೆದಿದ್ದೇನೆ. ಪತ್ರ ಬರೆಯುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದರು. ನಾನು ಬರೆದ ಪತ್ರ ಸೋರಿಕೆ ಮಾಡಿದ್ದನ್ನು ತನಿಖೆ ಮಾಡುವ ಬದಲಾಗಿ ನಾಯಕತ್ವವು ತನ್ನ ವಿರುದ್ಧ ತನ್ನ ಅಧಿಕಾರವನ್ನು ಚಲಾಯಿಸಿದೆ ಎಂದು ಆರೋಪಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ