ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಟಾಪ್ 10 ಶ್ರೀಮಂತ ಸಚಿವರಲ್ಲಿ ಎಂಟು ಮಂದಿ ದಕ್ಷಿಣ ಭಾರತದವರಾಗಿದ್ದಾರೆ. ಟಾಪ್ 10 ಶ್ರೀಮಂತ ಸಚಿವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಚಂದ್ರಶೇಖರ ಪೆಮ್ಮಸಾನಿ (ಟಿಡಿಪಿ) ಅವರಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ನಡೆಸಿದ ಸಮೀಕ್ಷೆ ಹೇಳಿದೆ.
ವೈದ್ಯರಾಗಿರುವ ಪೆಮ್ಮಸಾನಿ ಆಂಧ್ರಪ್ರದೇಶದವರಾಗಿದ್ದು, 5705 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ (ಕಾಂಗ್ರೆಸ್) 1413 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು (ಟಿಡಿಪಿ) 810 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಾಯ್ಡು ಅವರ ಪುತ್ರ ನಾ.ರಾ.ಲೋಕೇಶ ಲೋಕೇಶ 542 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಟಾಪ್ 10 ಶ್ರೀಮಂತ ಸಚಿವರಲ್ಲಿ ಒಬ್ಬರಾಗಿದ್ದಾರೆ.
ಟಾಪ್ 10 ಶ್ರೀಮಂತ ಸಚಿವರಲ್ಲಿ, ಬಿಜೆಪಿ ಮತ್ತು ಟಿಡಿಪಿ ತಲಾ ನಾಲ್ವರು ಸಚಿವರನ್ನು ಹೊಂದಿದ್ದರೆ,ಇಬ್ಬರು ಕಾಂಗ್ರೆಸ್ಸಿನವರು ಇದ್ದಾರೆ.
ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರದ ತ್ರಿಪುರ ಸಚಿವರಾದ ಸುಕ್ಲಾ ಚರಣ ನೋಟಿಯಾ ಭಾರತದ ‘ಬಡ’ ಸಚಿವರಾಗಿದ್ದು, 2 ಲಕ್ಷ ರೂ. ಘೋಷಿತ ಆಸ್ತಿಯನ್ನು ಹೊಂದಿದ್ದಾರೆ, ನಂತರ ಪಶ್ಚಿಮ ಬಂಗಾಳ ಸಚಿವ ಬಿರ್ಬಹಾ ಹಂಸ್ದಾ (ತೃಣಮೂಲ ಕಾಂಗ್ರೆಸ್) 3 ಲಕ್ಷ ರೂ. ಆಸ್ತಿಯನ್ನು ಹೊಂದಿದ್ದಾರೆ.
30 ರಾಜ್ಯ ವಿಧಾನಸಭೆಗಳಲ್ಲಿ, 11 ವಿಧಾನಸಭೆಗಳಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಮಂತ್ರಿಗಳಿದ್ದಾರೆ. ಎಂಟು ಸಚಿವರೊಂದಿಗೆ ಕರ್ನಾಟಕವು ಅತಿ ಹೆಚ್ಚು ಶತಕೋಟ್ಯಾಧಿಪತಿ ಸಚಿವರು ಇರುವ ರಾಜ್ಯವಾಗಿದೆ. ನಂತರ ಆಂಧ್ರಪ್ರದೇಶದಲ್ಲಿ ಆರು ಮತ್ತು ಮಹಾರಾಷ್ಟ್ರದಲ್ಲಿ ನಾಲ್ವರು ಶತಕೋಟ್ಯಧಿಪತಿ ಸಚಿವರಿದ್ದಾರೆ. ಅರುಣಾಚಲ ಪ್ರದೇಶ, ದೆಹಲಿ, ಹರಿಯಾಣ ಮತ್ತು ತೆಲಂಗಾಣದಲ್ಲಿ ತಲಾ ಇಬ್ಬರು, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು ಇದ್ದಾರೆ.
ಟಾಪ್-5 ಶ್ರೀಮಂತ ಸಚಿವರು
ಚಂದ್ರಶೇಖರ ಪೆಮ್ಮಸಾನಿ (ಕೇಂದ್ರ ಸಚಿವ) – ಟಿಡಿಪಿ – (ಗುಂಟೂರು ಸಂಸದ) – 5,705 ಕೋಟಿ
ಡಿ.ಕೆ. ಶಿವಕುಮಾರ (ಕರ್ನಾಟಕ ಸಚಿವ)– ಕಾಂಗ್ರೆಸ್ (ಕನಕಪುರ ಶಾಸಕ) – 1,413 ಕೋಟಿ
ಚಂದ್ರಬಾಬು ನಾಯ್ಡು ನಾರಾ (ಆಂಧ್ರ ಪ್ರದೇಶ ಸಿಎಂ) ಟಿಡಿಪಿ (ಕುಪ್ಪಂ ಶಾಸಕ)– 971 ಕೋಟಿ
ನಾರಾಯಣ ಪೊಂಗೂರು –(ಆಂಧ್ರ ಸಚಿವ) ಟಿಪಿಡಿ (ನೆಲ್ಲೂರು ಶಾಸಕ) – 824 ಕೋಟಿ
ಸುರೇಶ್ ಬಿ.ಎಸ್ –(ಕರ್ನಾಟಕ ಸಚಿವ) ಕಾಂಗ್ರೆಸ್ (ಹೆಬ್ಬಾಳ ಶಾಸಕ) – 648 ಕೋಟಿ
ಕೇಂದ್ರ ಸಚಿವರ ಮಂಡಳಿಯ 72 ಸದಸ್ಯರಲ್ಲಿ, ಆರು (8%) ಸಚಿವರು ಕೋಟ್ಯಾಧಿಪತಿಗಳಾಗಿದ್ದಾರೆ.
ಎಡಿಆರ್ ವಿಶ್ಲೇಷಣೆಯ ಪ್ರಕಾರ, 336 ಬಿಜೆಪಿ ಸಚಿವರಲ್ಲಿ 14 (4%) ಜನರು ಶತ ಕೋಟ್ಯಾಧಿಪತಿಗಳು, 61 ಕಾಂಗ್ರೆಸ್ ಸಚಿವರಲ್ಲಿ 11 (18%) ಸಚಿವರು ಶತ ಕೋಟ್ಯಾಧಿಪತಿಗಳು ಮತ್ತು 23 ಟಿಡಿಪಿ ಸಚಿವರಲ್ಲಿ ಆರು (26%) ಸಚಿವರು ಶತ ಕೋಟ್ಯಾಧಿಪತಿಗಳಾಗಿದ್ದಾರೆ.
ಸಚಿವರ ಸರಾಸರಿ ಆಸ್ತಿ 37.21 ಕೋಟಿ ರೂ.ಗಳಾಗಿದ್ದು, ವಿಶ್ಲೇಷಿಸಲಾದ 643 ಸಚಿವರಲ್ಲಿ 36 (6%) ಸಚಿವರು ಶತ ಕೋಟ್ಯಾಧಿಪತಿಗಳು. ಎಲ್ಲಾ ಸಚಿವರ ಒಟ್ಟು ಆಸ್ತಿ 23,929 ಕೋಟಿ ರೂ.ಗಳು ಎಂದು ವಿಶ್ಲೇಷಿಸಲಾಗಿದೆ.
643 ಸಚಿವರ ಪೈಕಿ 302 ಮಂದಿ (47%) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 174 ಸಚಿವರ ವಿರುದ್ಧ (27%) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (40%) ಮಂದಿ ವಿರುದ್ಧ ಪ್ರಕರಣಗಳಿವೆ.


ನಿಮ್ಮ ಕಾಮೆಂಟ್ ಬರೆಯಿರಿ