ಆಳಂದ ಸೇರಿ ರಾಜ್ಯದ ಎಲ್ಲ ಮತಗಳ್ಳತನ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕಲಬುರಗಿ ಜಿಲ್ಲೆಯ ಆಳಂದ‌ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರಿನ ಮಹದೇವಪುರ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಆರೋಪಿತ ಮತಗಳ್ಳತನ ಪ್ರಕರಣಗಳನ್ನ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ಆದೇಶ ಹೊರಡಿಸಿದೆ.
ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಬಿಕೆ ಸಿಂಗ್‌ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದು, ಸಿಸಿಡಿ, ಸಿಐಡಿ ಅಧೀಕ್ಷಕ ಸೈದುಲು ಅದಾವತ್‌ ಹಾಗೂ ಎಸ್‌ಇಡಿ, ಸಿಐಡಿ ಅಧೀಕ್ಷಕಿ ಶುಭಾನ್ವಿತ ತಂಡದಲ್ಲಿ ಇರಲಿದ್ದಾರೆ.
2023 ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್‌ಐಆರ್‌ ದಾಖಲಿಸಲಾಗಿದೆ.

2023ರ ಫೆಬ್ರವರಿ 21ರಂದು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 182, 419, 464, 465 ರಂತೆ ಪ್ರಕರಣ (ಮೊಕದ್ದಮೆ ಸಂಖ್ಯೆ: 26/2023) ದಾಖಲಾಗಿದೆ. ಈ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯದ ಇತರೇ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗಬಹುದಾದ ಇತರೇ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಅದಕ್ಕಾಗಿ ಸಿಐಡಿ ಪೊಲೀಸ್‌ ಮಹಾ ನಿರ್ದೇಶಕರಾದ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನ ರಚಿಸಲಾಗಿದೆ. ತನಿಖಾ ತಂಡವು ಎಲ್ಲಾ ಆಮಾಯಗಳಲ್ಲಿ ಪ್ರಕರಣಗಳ ಸಮಗ್ರ ತನಿಖೆ ಕೈಗೊಂಡು, ಶೀಘ್ರದಲ್ಲೇ ತನಿಖೆಯನ್ನು ಪೂರ್ಣಗೊಳಿಸಬೇಕು. ಬಳಿಕ ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement