ಶಿರಸಿ : ಪಶ್ಚಿಮ ಘಟ್ಟದ ಅತ್ಯಂತ ಸಂವೇದನಶೀಲ ಮತ್ತು ಜೀವವೈವಿಧ್ಯದಿಂದ ತುಂಬಿದ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ, ನದಿ ತಿರುವು ಯೋಜನೆ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಇದರ ಬೆನ್ನಲ್ಲೇ ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ತಿರುಗಿಸುವ ಪ್ರಸ್ತಾಪಿತ ಯೋಜನೆಯ ಸಾಧ್ಯತಾ ವರದಿ ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ವೃಕ್ಷಲಕ್ಷ ಆಂದೋಲನವು ತಿಳಿಸಿದೆ. ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೇಡ್ತಿ-ಅಘನಾಶಿನಿ ಯೋಜನೆಯ ಹಿನ್ನೆಲೆಯಲ್ಲಿ 1980-90ರ ದಶಕದಲ್ಲಿ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿ-ಗೋಳಿಮಕ್ಕಿ ಬಳಿಯ ಬಾಳೆಕೊಪ್ಪ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ ಸ್ಥಳೀಯರ ಭಾರೀ ವಿರೋಧ ಮತ್ತು ಪರಿಸರ ಹಿತಚಿಂತಕರ ಪ್ರತಿಭಟನೆಯ ಪರಿಣಾಮ ಕರ್ನಾಟಕ ವಿದ್ಯುತ್ ನಿಗಮ (KPC) ಈ ಯೋಜನೆಯನ್ನು ಕೈಬಿಟ್ಟಿತ್ತು. 2017 ರಲ್ಲಿ ಅಘನಾಶಿನಿ-ವರದಾ ನದಿ ತಿರುವು ಯೋಜನೆ ಮರುಜೀವ ಪಡೆದರೂ, 2021-22ರಲ್ಲಿ ಸಾರ್ವಜನಿಕ ಒತ್ತಡದಿಂದ ಆ ಯೋಜನೆಗೂ ತಡೆಬಿತ್ತು. ಈಗ, 2025ರ ಹೊತ್ತಿಗೆ ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಯ ಪ್ರಿಫಿಸಿಬಿಲಿಟಿ (ಸಾಧ್ಯತಾ) ವರದಿ ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅನಂತ ಅಶೀಸರ ತಿಳಿಸಿದ್ದಾರೆ.
ಯೋಜನೆಯ ಪ್ರಮುಖ ಅಂಶಗಳು:
ಅಘನಾಶಿನಿ ನದಿಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ಬಳಿ ಅಣೆಕಟ್ಟು ನಿರ್ಮಿಸಿ, ನೀರನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಯ ವಾಣಿ ವಿಲಾಸ ಜಲಾಶಯಕ್ಕೆ ಕಳುಹಿಸುವುದು ಯೋಜನೆಯ ಉದ್ದೇಶವಾಗಿದೆ. ನೀರನ್ನು ಎತ್ತಿ ಸಾಗಿಸಲು ಸುಮಾರು 194 ಕಿ.ಮೀ ಉದ್ದದ ಪೈಪ್ಲೈನ್ ಹಾಕಲಾಗುತ್ತದೆ. ಒಟ್ಟು 35 ಟಿಎಂಸಿ ನೀರನ್ನು ಅಲ್ಲಿಗೆ ಪಂಪ್ ಮಾಡಲಾಗುತ್ತದೆ. ಯೋಜನೆಯ ಅಂದಾಜು ವೆಚ್ಚ 23,000 ಕೋಟಿ ರೂ.ಗಳಾಗಿದೆ. ಈ ಯೋಜನೆಗೆ ಸಂಬಂಧಿಸಿದ ಪ್ರಿಫಿಸಿಬಿಲಿಟಿ (ಸಾಧ್ಯತಾ) ವರದಿಯನ್ನು ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (NWDA) ಸಿದ್ಧಪಡಿಸಿದ್ದು, ಬೆಂಗಳೂರು ಕಚೇರಿಯಿಂದ ಹೈದರಾಬಾದ್ ಮುಖಾಂತರ ದೆಹಲಿ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪರಿಸರ ತಜ್ಞರ ಎಚ್ಚರಿಕೆ:
ಪರಿಸರ ತಜ್ಞರ ವಿಶ್ಲೇಷಣೆಯ ಪ್ರಕಾರ, ಈ ಯೋಜನೆಯಿಂದ ಹಲವಾರು ದುಷ್ಪರಿಣಾಮಗಳು ಸಂಭವಿಸಬಹುದಾಗಿದೆ .ಈ ಯೋಜನೆಗಾಗಿ ಸುಮಾರು 1,20,000 ಮರಗಳು ಕಡಿದು ಹಾಕಬೇಕಾಗುತ್ತದೆ. ಶಿರಸಿ ಮತ್ತು ಸಾಗರ ಅರಣ್ಯ ವಿಭಾಗಗಳ ವ್ಯಾಪ್ತಿಯ 600 ಎಕರೆ ಅರಣ್ಯ ಭೂಮಿ ನಾಶವಾಗಲಿದೆ. ಅಘನಾಶಿನಿ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶ ಆಗಿದ್ದು, ಇದರಿಂದ ಪರಿಸರಕ್ಕೆ ಅಪಾರ ಹಾನಿಯಾಗಬಹುದಾದ ಸಾಧ್ಯತೆಯಿದೆ. ಅಘನಾಶಿನಿ ಕಣಿವೆ ಭೂವಿಜ್ಞಾನಪರವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, ಭಾರಿ ಭೂಕುಸಿತ ಸಂಭವಿಸಬಹುದು. ಈ ನದಿಯಿಂದ ನೀರನ್ನು ಅವಲಂಬಿಸಿರುವ ಕುಮಟಾ, ಶಿರಸಿ ಪಟ್ಟಣಗಳು ಹಾಗೂ ಸುಮಾರು ಒಂದು ಲಕ್ಷ ರೈತರ ಪಂಪ್ ಸೆಟ್ಟುಗಳಿಗೆ ನೀರಿನ ಸಮಸ್ಯೆ ಎದುರಾಗಿ ರೈತರಿಗೆ, ಜನಸಾಮಾನ್ಯರಿಗೆ ತೊಂದರೆಯಾಗಬಹುದು. ಕರಾವಳಿ ಮೀನುಗಾರರ ಬದುಕು ಸಂಕಷ್ಟಕ್ಕೆ ಸಿಲುಕಬಹುದು, ಯಾಕೆಂದರೆ ಅಘನಾಶಿನಿಯ ಇಳಿಜಾರಿನಲ್ಲಿ ಅಪಾರ ಜಲಚರ ಜೀವಿಗಳು, ಮೀನುಗಾರಿಕೆ ಮತ್ತು ಕೃಷಿ ವ್ಯವಸ್ಥೆ ಇವೆ. ನೀರಿನ ಹರಿವು ಕಡಿಮೆಯಾಗುವ ಮೂಲಕ ಈ ಜೀವನಧಾರೆಯೇ ಕಣ್ಮರೆಯಾಗಲಿದೆ ಎಂಬ ಆತಂಕವೂ ಇದೆ ಎಂದು ವೃಕ್ಷಲಕ್ಷ ಆಂದೋಲನ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ