ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ; 15ಕ್ಕೆ 15 ಸ್ಥಾನಗಳಲ್ಲೂ ರಮೇಶ ಕತ್ತಿ ಬಣಕ್ಕೆ ಜಯ

ಬೆಳಗಾವಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ ಕತ್ತಿ (Ramesh Katti) ಬಣ ಐತಿಹಾಸಿಕ ದಾಖಲೆ ಮಾಡಿದೆ. ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 15ಕ್ಕೆ 15ರಲ್ಲಿಯೂ ರಮೇಶ್ ಕತ್ತಿ ಬಣ ಜಯಗಳಿಸಿದೆ.
ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ ರಮೇಶ ಕತ್ತಿ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿತ್ತು. ಆ ಚುನಾವಣೆಯನ್ನು ಅವರು ಸವಾಲಾಗಿ ಸ್ವೀಕಾರ ಮಾಡಿದ್ದರು. ರಮೇಶ ಕತ್ತಿ ಹಾಗೂ ಎ.ಬಿ. ಪಾಟೀಲ ಬಣ ಭರ್ಜರಿ ಗೆಲುವು ಸಾಧಿಸಿದೆ. ಸಚಿವ ಸತೀಶ ಜಾರಕಿಹೊಳಿ ಬಣ ಹಾಗೂ ಅಣ್ಣಾಸಾಹೇಬ ಜೊಲ್ಲೆ ಬಣಕ್ಕೆ ಬಹು ದೊಡ್ಡ ಸೋಲುಂಟಾಗಿದೆ.

ದಶಕಗಳಿಂದ ತಮ್ಮ ಹಿಡಿತದಲ್ಲಿದ್ದ ಈ ಸಂಸ್ಥೆ ಯಾವುದೇ ಕಾರಣಕ್ಕೂ ಕೈತಪ್ಪಿ ಹೋಗಬಾರದು ಎಂದು ರಮೇಶ ಜಾರಕಿಹೊಳಿ ತಮ್ಮ ಎದುರಾಳಿ ಹಾಗೂ ಮಾಜಿ ಸಚಿವ ಎ.ಬಿ. ಪಾಟೀಲ ಅವರ ಜೊತೆ ಕೈಜೋಡಿಸಿದ್ದರು. ಅದು ಸಹ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಬಹುದು.
ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಕುಟುಂಬದ ಮಧ್ಯೆ ಜಿದ್ದಾಜಿದ್ದಿಯ ಚುನಾವಣೆ ಇದಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಈ ಚುನಾವಣೆ ನಡೆದಿತ್ತು.‌ ಕತ್ತಿ ಪರ ಪೆನೆಲ್ ಗೆ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

ಆಯ್ಕೆಯಾದ ಅಭ್ಯರ್ಥಿಗಳು: ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ಅಭ್ಯರ್ಥಿಗಳಾಗಿದ್ದ ಸನ್ನಾಯಿಕ ಶ್ರೀಮಂತ ಗಂಗಪ್ಪ (ಪರಿಶಿಷ್ಟ ಜಾತಿ), ಲಂಕೆಪ್ಪಗೋಳ ಬಸವಣ್ಣಿ ಸಣ್ಣಪ್ಪ( ಪರಿಶಿಷ್ಟ ಪಂಗಡ), ಗಜಾನನ ಕೊಳ್ಳಿ ( ಹಿಂದುಳಿದ ವರ್ಗದ ಅ), ಸತ್ಯಪ್ಪ ನಾಯಿಕ ( ಹಿಂದುಳಿದ ಬ), ನಾಯಿಕವಾಡಿ ಮಹಬೂಬಿ ಗೌಸ ಆಜಂ, ಮೂಡಲಗಿ ಮಂಗಲ ಗುರುಸಿದ್ದಪ್ಪಾ (ಮಹಿಳಾ ಮೀಸಲು), ಸಾಮಾನ್ಯ ಕ್ಷೇತ್ರದಿಂದ ಕತ್ತಿ ಲವ ರಮೇಶ, ಕಲಗೌಡ ಪಾಟೀಲ, ವಿನಯ ಪಾಟೀಲ, ಮಹಾವೀರ ನಿಲಜಗಿ, ಶಿವಾನಂದ ಮುಡಶಿ, ಮಹಾದೇವ ಕ್ಷೀರಸಾಗರ, ಮದವಾಲ ಶಿವನಗೌಡ ಸತ್ಯಪ್ಪ, ಮುನ್ನೋಳಿ ಲಕ್ಷ್ಮಣ ಬಸವರಾಜ, ವಾಸೇದಾರ ಕೆಂಪಣ್ಣಾ ಸಾತಪ್ಪ ಜಯ ಸಾಧಿಸಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ಶೇ.67.54 ಮತದಾನವಾಗಿತ್ತು. 41,050 ಮತದಾರರು ಮತದಾನ ಮಾಡಿದ್ದರು. 15 ನಿರ್ದೇಶಕರ ಸ್ಥಾನಕ್ಕೆ ಒಟ್ಟು 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಂಘದ 97,841 ಸದಸ್ಯರ ಪೈಕಿ 60,046 ಜನ ಮತದಾನಕ್ಕೆ ಅರ್ಹರಾಗಿದ್ದರು. 122 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement