ಅತ್ಯಾಚಾರ ಪ್ರಕರಣ : ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು : ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಿತಾವಧಿ ಜೈಲು ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದಾರೆ.
ಬಾರ್‌ & ಬೆಂಚ್‌ ವರದಿ ಪ್ರಕಾರ, ವಕೀಲ ಬಸವರಾಜ ಸಪ್ಪಣ್ಣವರ ಮೂಲಕ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. 2025ರ ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವನ ಪರ್ಯಂತ ಶಿಕ್ಷೆ ವಿಧಿಸಿತ್ತು. ಇದಾದ ಸರಿಸುಮಾರು ಎರಡು ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಿದ್ದಾರೆ.
ಹೊಳೆನರಸೀಪುರದ ಗನ್ನಿಗಢ ಮತ್ತು ಬೆಂಗಳೂರಿನ ಬನಶಂಕರಿ ಮನೆಯಲ್ಲಿ ಮನೆಗೆಲಸದಾಕೆ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಅಪರಾಧದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ದೋಷಿಯೆಂದು ವಿಶೇಷ ನ್ಯಾಯಾಲಯ ತೀರ್ಮಾನಿಸಿ ಆಗಸ್ಟ್‌ 2ರಂದು ಜೀವನ ಪರ್ಯಂತ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಈಗ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಸಂತ್ರಸ್ತೆ ನುಡಿದಿರುವ ಸಾಕ್ಷಿ ಮತ್ತು ಆಕೆ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ವ್ಯತ್ಯಾಸವಿದೆ. ಘಟನೆಯ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಗನ್ನಿಗಢದ ಫಾರ್ಮ್‌ ಹೌಸ್‌ಗೆ ಬಂದಿದ್ದರು. ಅವರನ್ನು ನೋಡಿ ಸಂತ್ರಸ್ತೆಯು ಭೀತಿಗೊಂಡು ಅಲ್ಲಿಂದ ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. ಆನಂತರ ಪೊಲೀಸರು ಆಕೆಯನ್ನು ಎಸ್‌ಐಟಿಯ ಬೆಂಗಳೂರು ಕಚೇರಿಗೆ ಕರೆದೊಯ್ದು, ದೂರು ದಾಖಲಿಸಲು ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಇದರ ಪ್ರಕಾರ ನೋಡುವುದಾದರೆ ಪೊಲೀಸರು ಸಂತ್ರಸ್ತೆಯನ್ನು ಹಿಂಬಾಲಿಸಿ, ಆಕೆಯಿಂದ ಬಲವಂತದಿಂದ ದೂರು ಪಡೆದಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಪ್ರಜ್ವಲ್‌ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ ಎಂದು ಬಾರ್‌ & ಬೆಂಚ್‌ ವರದಿ ಹೇಳಿದೆ.
ವರದಿ ಪ್ರಕಾರ, 2021ರ ಜನವರಿ 1ರಿಂದ 2022ರ ಜನವರಿ 31ರ ವರೆಗೆ ಆರೋಪಿತ ಘಟನೆ ನಡೆದಿದ್ದು, 2024ರ ಮೇ 10ರಂದು ಸಂತ್ರಸ್ತೆಯು ಪೊಲೀಸರನ್ನು ಬಸವನಗುಡಿಯಲ್ಲಿ ಅತ್ಯಾಚಾರ ಎಸಗಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಇಲ್ಲಿ ಕೃತ್ಯ ನಡೆದ ಹಾಸಿಗೆ ಮತ್ತು ಮಂಚ ತೋರಿಸಿದ್ದು, ಪ್ರಾಸಿಕ್ಯೂಷನ್‌ನ 6ನೇ ಸಾಕ್ಷಿಯಾದ ಲಿಂಗನಮೂರ್ತಿ ಅವರು ಹಾಸಿಗೆಯಲ್ಲಿ ಕೆಲವು ಕಲೆಗಳು ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ. ಮೂರು ವರ್ಷಗಳಾದರೂ ಹಾಸಿಗೆಯ ಮೇಲಿನ ಬಟ್ಟೆಯನ್ನು ತೊಳೆಯದಿರಲು ಹೇಗೆ ಸಾಧ್ಯ ಎಂಬುದರ ಬಗ್ಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಯಾವುದೇ ಪ್ರಶ್ನೆ ಬಂದಿಲ್ಲ ಎಂದು ಆಕ್ಷೇಪಿಸಲಾಗಿದೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

2024ರ ಮೇ 28ರಂದು ಗನ್ನಿಗಢದ ಫಾರ್ಮ್‌ ಹೌಸ್‌ನಲ್ಲಿ ಕಾರ್ಮಿಕರು ಉಳಿದುಕೊಳ್ಳಲು ನಿರ್ಮಿಸಲಾಗಿದ್ದ ಮನೆಯಲ್ಲಿ ಕೆಲವು ಉಡುಪು ಮತ್ತು ತಲೆಗೂದಲನ್ನು ತನಿಖಾಧಿಕಾರಿ ಪತ್ತೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತೆಯು ತನಿಖಾಧಿಕಾರಿಯನ್ನು ಅಲ್ಲಿಗೆ ಕರೆದೊಯ್ಯದೆ ಸಂತ್ರಸ್ತೆಯ ಗೈರಿನಲ್ಲಿ ತನಿಖಾಧಿಕಾರಿಯು ಉಡುಪು ಮತ್ತು ತಲೆಗೂದಲನ್ನು ಜಫ್ತಿ ಮಾಡಿರುವುದು ಗಂಭೀರ ಲೋಪವಾಗಿದ್ದು, ಇದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಮೇಲ್ಮನವಿ ಅರ್ಜಿಯಲ್ಲಿ ವಾದಿಸಲಾಗಿದೆ.
ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆಯ ಜೊತೆಗೆ ₹11.60 ಲಕ್ಷ ದಂಡವನ್ನು ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷವನ್ನು ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ನೀಡಲು ಆದೇಶಿಸಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement