ಬೆಂಗಳೂರು : ಗಟ್ಟಿಮೇಳ ಧಾರಾವಾಹಿಯ ಮೂಲಕ ಕರ್ನಾಟಕದ ಜನರ ಮನಗೆದ್ದಿದ್ದ ಹಿರಿಯ ನಟಿ ಕಮಲಶ್ರೀ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ನಟಿ ಕಮಲಶ್ರೀ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರು ಮಂಗಳವಾರ (ಸೆಪ್ಟೆಂಬರ್ 30) ಮೃತಪಟ್ಟಿದ್ದಾರೆ.
ಕಮಲಶ್ರೀ ಅವರು ಜನಪ್ರಿಯ ಧಾರಾವಾಹಿಯಾದ ‘ಗಟ್ಟಿಮೇಳ’ ದಲ್ಲಿ ಅಜ್ಜಿಯ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿಯು ಮುಗಿಯುತ್ತಿದ್ದಂತೆಯೇ ಅವರ ಆರೋಗ್ಯವೂ ಕ್ಷೀಣಿಸಲು ಆರಂಭಿಸಿತು. ದುರದೃಷ್ಟವಶಾತ್, ಈ ಕಠಿಣ ಸಮಯದಲ್ಲಿ ಅವರು ಆರ್ಥಿಕ ಸಂಕಷ್ಟವನ್ನೂ ಎದುರಿಸಬೇಕಾಯಿತು. ಅವರು ಒಬ್ಬರೇ ಇದ್ದರು. ಅನಾರೋಗ್ಯದ ಕಾರಣಕ್ಕೆ ದುಡಿಯಲು ಆಗದೆ, ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಅವರು ಕಷ್ಟಪಟ್ಟಿದ್ದರು. ಅಗತ್ಯವಾದ ಚಿಕಿತ್ಸೆಗೆ ಹಣಕಾಸಿನ ಅಡಚಣೆ ಎದುರಾದಾಗ, ಸಹಕಲಾವಿದರು ಅವರ ನೆರವಿಗೆ ಬಂದರು.
ಗಟ್ಟಿಮೇಳ ಧಾರವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಇದಲ್ಲದೆ, ‘ಕಾವೇರಿ ಕನ್ನಡ ಮೀಡಿಯಂ’, ‘ಪತ್ತೆದಾರಿ ಪ್ರತಿಭಾ’ ಮುಂತಾದ ಧಾರಾವಾಹಿಗಳಲ್ಲಿ ಸಹ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ಅವರು ಡಾ. ರಾಜಕುಮಾರ ಬ್ಯಾನರ್‌ನ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದರು. ನಾಟಕಗಳಲ್ಲೂ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ತಮ್ಮ ಸ್ಥಾನ ಮಾಡಿಕೊಂಡಿದ್ದರು. ಅವರ ನಟನೆಯು ಸಹಜ ಮತ್ತು ಭಾವನಾತ್ಮಕವಾಗಿತ್ತು, ಇದು ಪ್ರೇಕ್ಷಕರಲ್ಲಿ ಶಾಶ್ವತ ಗುರುತು ಮೂಡಿಸಿತು.


ನಿಮ್ಮ ಕಾಮೆಂಟ್ ಬರೆಯಿರಿ