ಬೆಂಗಳೂರು ಬಿಸಿನೆಸ್‌ ಕಾರಿಡಾರಿಗೆ ಸಂಪುಟ ಅಸ್ತು: ಸಂಚಾರ ದಟ್ಟಣೆ ಶೇ. 40 ರಷ್ಟು ಕಡಿತವಾಗುವ ನಿರೀಕ್ಷೆ

ಬೆಂಗಳೂರು: ಭಾರಿ ಸಂಚಾರ ದಟ್ಟಣೆಯಿಂದಲೇ ಕುಖ್ಯಾತಿ ಗಳಿಸಿರುವ ಬೆಂಗಳೂರು ನಗರದ ಸಂಚಾರ ಸಮಸ್ಯೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ 117 ಕಿಲೋಮೀಟರ್ ಉದ್ದದ ಪೆರಿಫೆರಲ್ ರಿಂಗ್ ರೋಡ್ (PRR) ಯೋಜನೆಗೆ ಹೊಸ ಸ್ವರೂಪ ನೀಡಿ, ಅದನ್ನು ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ ಎಂದು ಮರುನಾಮಕರಣ ಮಾಡಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಮೂಲಕ ಈ ಯೋಜನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಇದು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಂದು “ಐತಿಹಾಸಿಕ ಹೆಜ್ಜೆ” ಎಂದು ಬಣ್ಣಿಸಿದ್ದಾರೆ. ಈ ಕಾರಿಡಾರ್ ಕಾರ್ಯರೂಪಕ್ಕೆ ಬಂದ ನಂತರ ನಗರದ ಸಂಚಾರ ದಟ್ಟಣೆ ಶೇ. 40ರಷ್ಟು ಕಡಿಮೆಯಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ. ಇದರಿಂದ ಹೆದ್ದಾರಿಗಳು ಮತ್ತು ಕೈಗಾರಿಕಾ ವಲಯಗಳ ನಡುವೆ ಸಂಚರಿಸುವ ವಾಹನಗಳು ನಗರದ ಮುಖ್ಯ ಭಾಗಕ್ಕೆ ಬರದೇ ಹೊರ ಹೋಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
“ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಡಿಮೆ ಆಗಬೇಕು ಎಂಬುದು ನಮ್ಮ ಉದ್ದೇಶ. ಈ ಯೋಜನೆಯಿಂದ ಸುಮಾರು 1,900 ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ನನಗೆ ತಿಳಿದಿದೆ, ಆದರೆ ಸರ್ಕಾರವು ಅವರು ನಿರೀಕ್ಷೆಗಿಂತ ಹೆಚ್ಚಿನ ಪರಿಹಾರವನ್ನು ನೀಡಲು ಮುಂದಾಗಿದೆ. ಇದು ಸರ್ಕಾರದ ದೊಡ್ಡ ನಿರ್ಧಾರಗಳಲ್ಲಿ ಒಂದು ಎಂದು ಶಿವಕುಮಾರ ಹೇಳಿದ್ದಾರೆ.
“ಯಾವುದಾದರೂ ಭೂಮಾಲೀಕರು ಜಮೀನು ನೀಡಲು ನಿರಾಕರಿಸಿದರೆ, ನಾವು ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು, ಯೋಜನೆಯನ್ನು ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಡಿ-ನೋಟಿಫೈ ಮಾಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಐದು ಆಯ್ಕೆಗಳ ಪ್ಯಾಕೇಜ್:
ದೀರ್ಘಕಾಲದ ಭೂಸ್ವಾಧೀನ ವಿವಾದಗಳನ್ನು ಬಗೆಹರಿಸಲು ಸರ್ಕಾರವು ಭೂಮಿ ಕಳೆದುಕೊಳ್ಳುವ ರೈತರು ಮತ್ತು ಭೂಮಾಲೀಕರಿಗಾಗಿ ಐದು ಆಯ್ಕೆಗಳ ಹೊಸ ಪರಿಹಾರ ಪ್ಯಾಕೇಜ್ ಬಗ್ಗೆ ಹೇಳಿದೆ.
ನಗದು ಪರಿಹಾರ-ನಗರ ಪ್ರದೇಶಗಳಲ್ಲಿ ಮಾರ್ಗದರ್ಶಿ ಮೌಲ್ಯದ (Guidance Value) ದುಪ್ಪಟ್ಟು ಮತ್ತು ನಗರದ ಮಿತಿಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಗದರ್ಶಿ ಮೌಲ್ಯದ ಮೂರು ಪಟ್ಟು ನಗದು ಪರಿಹಾರ (ಅಕ್ಟೋಬರ್ 2023ರ ದರಗಳ ಆಧಾರದ ಮೇಲೆ), ಟಿಡಿಆರ್ (TDR)-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾನದಂಡಗಳ ಪ್ರಕಾರ, ಮಾರ್ಗದರ್ಶಿ ಮೌಲ್ಯದ ದುಪ್ಪಟ್ಟಿಗೆ ಸಮಾನವಾದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು (Transfer of Development Rights), ಹೆಚ್ಚುವರಿ ಎಫ್‌ಎಆರ್ (FAR/FSI)-ಯೋಜನಾ ಮಾರ್ಗದ ಉಳಿದ ಭೂಮಿಯಲ್ಲಿ ಬಳಸಲು ಹೆಚ್ಚುವರಿ ಮಹಡಿ ಪ್ರದೇಶ ಅನುಪಾತ (Floor Area Ratio/Floor Space Index) ಹಾಗೂ ವಸತಿ ನಿವೇಶನ-ವಸತಿ ಪ್ರದೇಶಗಳಲ್ಲಿ ಅರ್ಧ ಎಕರೆಗಿಂತ ಹೆಚ್ಚು ಭೂಮಿ ಕಳೆದುಕೊಳ್ಳುವವರಿಗೆ, ಹತ್ತಿರದ ಬಿಡಿಎ ಲೇಔಟ್‌ಗಳಲ್ಲಿ ಶೇ. 40ರಷ್ಟು ಅಭಿವೃದ್ಧಿಪಡಿಸಿದ ನಿವೇಶನವನ್ನು ಸರ್ಕಾರ ನೀಡಲಿದೆ.
ವಾಣಿಜ್ಯ ನಿವೇಶನ-ಅಭಿವೃದ್ಧಿಪಡಿಸಿದ ವಾಣಿಜ್ಯ ಭೂಮಿಯ ಸಂದರ್ಭದಲ್ಲಿ, ಯೋಜನೆಗೆ ಹೊಂದಿಕೊಂಡಿರುವ 35 ಮೀಟರ್ ವಾಣಿಜ್ಯ ಕಾರಿಡಾರ್‌ನಲ್ಲಿ ಶೇ. 35ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗುತ್ತದೆ. ಸಣ್ಣ ಭೂಮಾಲೀಕರು ನಗದು ಪರಿಹಾರ ಪಡೆಯಬಹುದಾಗಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಕೇವಲ ಸಂಚಾರ ಸಮಸ್ಯೆಗೆ ಪರಿಹಾರ ನೀಡುವ ಪ್ರಮುಖ ಕ್ರಮವಾಗಿರುವುದಲ್ಲದೆ, ದೊಡ್ಡ ಪ್ರಮಾಣದ ಭೂಮಿಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ತೆರೆಯಲಿದ್ದು, ಬೆಂಗಳೂರನ್ನು ಪ್ರಮುಖ ಹೂಡಿಕೆ ಕೇಂದ್ರವಾಗಿ ಪರಿವರ್ತಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement