ಗುರುಗ್ರಾಮ : ಮದುವೆಯಾಗಿ, ನಂತರ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಹಲವಾರು ಪುರುಷರನ್ನು ವಂಚಿಸಿದ್ದ ಯವತಿಯೊಬ್ಬಳನ್ನು ರಾಜಸ್ಥಾನ ಪೊಲೀಸರು ಗುರುವಾರ ಗುರುಗ್ರಾಮದಲ್ಲಿ ಬಂಧಿಸಿದ್ದಾರೆ.
ವಂಚಕಿ ‘ವಧು’ ವನ್ನು ಕಾಜಲ್ ಎಂದು ಗುರುತಿಸಲಾಗಿದೆ. ಈಕೆ ಕಳೆದ ಒಂದು ವರ್ಷದಿಂದ ಪೊಲೀಸರಿಂದ ತಪ್ಪಿಸಿಕೊಂಡು ಗುರುಗ್ರಾಮದ ಎನ್‌ಕ್ಲೇವ್ ಒಂದರಲ್ಲಿ ಅಡಗಿ ಕುಳಿತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ ಜಾಲ:
ರಾಜಸ್ಥಾನ ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ನಿವಾಸಿ ಭಗತ್ ಸಿಂಗ್ ಎಂಬಾತನು 2024ರ ಮೇ ತಿಂಗಳಲ್ಲಿ ರಾಜಸ್ಥಾನದ ಸೀಕರ್ ನಿವಾಸಿ ತಾರಾಚಂದ ಜಾಟ್ ಅವರನ್ನು ಭೇಟಿಯಾಗಿದ್ದನು. ಭಗತ್ ಸಿಂಗ್, ತನ್ನ ಇಬ್ಬರು ಹೆಣ್ಣುಮಕ್ಕಳಾದ ಕಾಜಲ್ ಮತ್ತು ತಮನ್ನಾ ಎಂಬವರನ್ನು ತಾರಾಚಂದ ಜಾಟ್ ಅವರ ಇಬ್ಬರು ಪುತ್ರರಾದ ಭನ್ವರಲಾಲ ಮತ್ತು ಶಂಕರಲಾಲ ಜೊತೆ ಮದುವೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದ.
ನಂತರ ಮದುವೆ ಸಿದ್ಧತೆಗಳ ನೆಪ ಹೇಳಿ ಭಗತ್ ಸಿಂಗ್, ತಾರಾಚಂದ ಅವರಿಂದ ₹ 11 ಲಕ್ಷ ಹಣವನ್ನು ಪಡೆದುಕೊಂಡಿದ್ದ. 2024ರ ಮೇ 21 ರಂದು, ಭಗತ್ ಸಿಂಗ್ ತನ್ನ ಪತ್ನಿ ಸರೋಜಾ, ಮಗ ಸೂರಜ್ ಮತ್ತು ಇಬ್ಬರು ಹೆಣ್ಣುಮಕ್ಕಳ (ವಧುಗಳು) ಜೊತೆ ಅತಿಥಿ ಗೃಹಕ್ಕೆ ಬಂದು ತಂಗಿದ್ದರು. ನಂತರ ತಾರಾಚಂದ ಜಾಟ್ ಅವರ ಪುತ್ರರೊಂದಿಗೆ ಇಬ್ಬರು ಹೆಣ್ಣುಮಕ್ಕಳ ಮದುವೆ ನೆರವೇರಿಸಿದ್ದ.
ಮದುವೆಯ ನಂತರ ಭಗತ್ ಸಿಂಗ್ ಕುಟುಂಬವು ತಾರಾಚಂದ ಅವರ ಮನೆಯಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿತ್ತು. ಆದರೆ, ಮೂರನೇ ದಿನ, ಸಿಂಗ್ ಮತ್ತು ಆತನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು, ವಧುಗಳಿಗೆ ನೀಡಲಾಗಿದ್ದ ಚಿನ್ನಾಭರಣ, ಹಣ ಮತ್ತು ಬಟ್ಟೆಗಳೊಂದಿಗೆ ರಾತ್ರೋರಾತ್ರಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಲ ಪತ್ತೆ ಹಚ್ಚಿದ ಪೊಲೀಸರು…
ತಾರಾಚಂದ ಈ ಕುರಿತು ಸೀಕರ್ ಜಿಲ್ಲೆಯ ದಂತಾರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಡಿಸೆಂಬರ್ 18ರಂದು ಭಗತ್ ಸಿಂಗ್ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಈ ಕುಟುಂಬವು ವಂಚನೆಯ ಉದ್ದೇಶದಿಂದ ಮದುವೆಗಳನ್ನು ಏರ್ಪಡಿಸುವ ಜಾಲವನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ನಂತರ, ಪೊಲೀಸರು ತಮನ್ನಾ ಮತ್ತು ಸೂರಜ್ ಎಂಬವರನ್ನೂ ಬಂಧಿಸಿದರು.
ಆದರೆ, ಕಾಜಲ್ ಮಾತ್ರ ತಲೆಮರೆಸಿಕೊಂಡಿದ್ದಳು. ಆಕೆ ಜೈಪುರ ಮತ್ತು ಮಥುರಾದಲ್ಲಿ ಸ್ವಲ್ಪ ಸಮಯ ಕಳೆದ ನಂತರ ಗುರುಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಗುರುವಾರ ಸೀಕರ್ ಪೊಲೀಸರು, ಗುರುಗ್ರಾಮದ ಪೊಲೀಸರ ಸಹಯೋಗದೊಂದಿಗೆ ಕಾಜಲ್‌ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಘಟಿತ ವಂಚನೆ ಜಾಲ:
ಪೊಲೀಸರ ವಿಚಾರಣೆ ವೇಳೆ, ಕಾಜಲ್ ತಂದೆ ಭಗತ್ ಸಿಂಗ್ ಸಂಘಟಿತ ವಂಚನೆ ಜಾಲವನ್ನು ರೂಪಿಸಿದ್ದನ್ನು ಕಾಜಲ್ ಒಪ್ಪಿಕೊಂಡಿದ್ದಾಳೆ. “ಶ್ರೀಮಂತ ಕುಟುಂಬಗಳ ಜೊತೆಗೆ ಮದುವೆ ಸಂಬಂಧ ಹುಡುಕುತ್ತಿದ್ದರು, ಈ ಇಬ್ಬರು ಹೆಣ್ಣುಮಕ್ಕಳಿಗೆ ಈ ‘ವಂಚನೆ ವ್ಯವಹಾರ’ದಲ್ಲಿ ಪ್ರಮುಖ ಪಾತ್ರವಿತ್ತು. ಮದುವೆಯ ನಾಟಕದ ಮೂಲಕವೇ ಇವರು ಜನರಲ್ಲಿ ವಿಶ್ವಾಸ ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ, ಎಎಸ್‌ಐ ಪೂರ್ಣಮಲ್, “ಆರೋಪಿಗಳು ವರ ಮತ್ತು ಅವರ ಕುಟುಂಬದೊಂದಿಗೆ ಕೇವಲ ಎರಡು ಅಥವಾ ಮೂರು ದಿನಗಳು ಇರುತ್ತಿದ್ದರು ಮತ್ತು ಎಂದಿಗೂ ಮದುವೆಯನ್ನು ಪದ್ಧತಿಯನ್ನು ಪೂರ್ಣಗೊಳಿಸುತ್ತಿರಲಿಲ್ಲ (ಮದುವೆಯ ಸಂಪ್ರದಾಯಗಳನ್ನು ಅನುಸರಿಸುತ್ತಿರಲಿಲ್ಲ),” ಎಂದು ತಿಳಿಸಿದ್ದಾರೆ.
“ಇದೇ ರೀತಿ ಈ ತಂಡ ಅನೇಕ ಜನರಿಗೆ ವಂಚನೆ ಮಾಡಿರಬಹುದು ಎಂದು ನಾವು ಶಂಕಿಸಿದ್ದೇವೆ. ಈಗ ನಾವು ಈ ಜಾಲದ ಇತರ ಸಹಚರರು ಮತ್ತು ಅವರ ಸಂಪರ್ಕಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ,” ಎಂದು ಪೂರ್ಣಮಲ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ