ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಹಗ್ಗ-ಜಗ್ಗಾಟಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ (ಡಿಕೆಎಸ್) ಅವರು ಬುಧವಾರ ಹೊಸ ಟ್ವಿಸ್ಟ್ ನೀಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಕುಮಾರ, “ನಾನು ಶಾಶ್ವತವಾಗಿ ಈ ಹುದ್ದೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ… ಈಗಾಗಲೇ ಐದೂವರೆ ವರ್ಷಗಳಾಗಿವೆ ಮತ್ತು ಮಾರ್ಚ್‌ನಲ್ಲಿ ಆರು ವರ್ಷವಾಗುತ್ತದೆ” ಎಂದು ಹೇಳಿದರು.
ನಂತರ ಅವರು ತಮ್ಮ ಬೆಂಬಲಿಗರಿಗೆ – ತಾವು ಪಕ್ಷದ ರಾಜ್ಯ ನಾಯಕತ್ವ ತಂಡದಲ್ಲಿ ಮುಂದುವರಿಯುವುದಾಗಿ ಭರವಸೆ ನೀಡಿದರು. “ಚಿಂತಿಸಬೇಡಿ… ನಾನು ಮುಂಚೂಣಿಯಲ್ಲಿರುತ್ತೇನೆ” ಎಂದರು.
“ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಮುಂದುವರಿಯುತ್ತೇನೆಯೇ ಎನ್ನುವುದು ಬೇರೆ ವಿಷಯ,” ಎಂದ ಅವರು, “… ಆದರೆ ನನ್ನ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿಗಳು ತೆರೆಯಬೇಕು ಎಂದು ನಾನು ಬಯಸುತ್ತೇನೆ. ನಾನು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ಜವಾಬ್ದಾರಿಯನ್ನು ಬಿಟ್ಟುಕೊಡಲು ಬಯಸಿದ್ದೆ… ಆದರೆ ರಾಹುಲ್ ಗಾಂಧಿ ಮತ್ತು (ಕಾಂಗ್ರೆಸ್ ಮುಖ್ಯಸ್ಥ) ಮಲ್ಲಿಕಾರ್ಜುನ ಖರ್ಗೆ ಅವರು ಮುಂದುವರಿಯುವಂತೆ ಕೇಳಿಕೊಂಡರು. ಹಾಗಾಗಿ, ನಾನು ನನ್ನ ಕರ್ತವ್ಯ ನಿರ್ವಹಿಸಿದೆ” ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ