ನವದೆಹಲಿ: ಕೇಂದ್ರ ಸರ್ಕಾರವು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳನ್ನು (Labour Codes) ನವೆಂಬರ್ 21, 2025 ರಿಂದ ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು (Appointment Letters) ನೀಡಬೇಕು ಮತ್ತು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು ಎಂದು ಆದೇಶಿಸಲಾಗಿದೆ.
ಈ ಹೊಸ ನಿಯಮಗಳ ಪ್ರಕಾರ, ಗಿಗ್ (Gig) ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರಿಗೂ ಇನ್ನು ಮುಂದೆ ಸಾಮಾಜಿಕ ಭದ್ರತೆ ಸೌಲಭ್ಯಗಳು ದೊರೆಯಲಿವೆ. ಇವುಗಳಲ್ಲಿ ಪಿಎಫ್ (PF), ಇಎಸ್‌ಐಸಿ (ESIC), ವಿಮೆ, ಹೆರಿಗೆ ಪ್ರಯೋಜನಗಳು (Maternity Benefits), ಮತ್ತು ಪಿಂಚಣಿ ಸೌಲಭ್ಯಗಳು ಸೇರಿವೆ. ಈ ಹೊಸ ಕಾನೂನಿನಿಂದಾಗಿ, ಮಹಿಳೆಯರಿಗೆ ಈಗ ಅವರ ಸಮ್ಮತಿ ಮೇರೆಗೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿಯಲ್ಲೂ ಮತ್ತು ಎಲ್ಲ ರೀತಿಯ ಉದ್ಯೋಗಗಳಲ್ಲೂ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಮುಖ್ಯ ಬದಲಾವಣೆಗಳು ಮತ್ತು ಪ್ರಯೋಜನಗಳು
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಈ ಹೊಸ ಕಾರ್ಮಿಕ ಸಂಹಿತೆಗಳು ವೇತನ, ಕಾರ್ಯಸ್ಥಳದ ಸುರಕ್ಷತೆ, ಸಾಮಾಜಿಕ ಭದ್ರತೆ, ಸಮಾನತೆ ಮತ್ತು ನೌಕರರ ಹಕ್ಕುಗಳ ವಿಷಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲಿವೆ.
ನಾಲ್ಕು ಪ್ರಮುಖ ಸಂಹಿತೆಗಳು:
ವೇತನ ಸಂಹಿತೆ- 2019 (Code on Wages- 2019)
ಕೈಗಾರಿಕಾ ಸಂಬಂಧಗಳ ಸಂಹಿತೆ- 2020 (Industrial Relations Code- 2020)
ಸಾಮಾಜಿಕ ಭದ್ರತಾ ಸಂಹಿತೆ- 2020 (Code on Social Security- 2020)
ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ- 2020 (OSH Code- 2020)
ಮೊದಲಿದ್ದ 29 ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ರೂಪಿಸಿರುವ ಈ ನಾಲ್ಕು ಕಾರ್ಮಿಕ ಸಂಹಿತೆಗಳ (Labour Codes) ಜಾರಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ನೇಮಕಾತಿ ಪತ್ರ ಕಡ್ಡಾಯ: ಈ ಮೊದಲು ಕಡ್ಡಾಯವಾಗಿರದ ನೇಮಕಾತಿ ಪತ್ರವನ್ನು ಈಗ ಎಲ್ಲ ಉದ್ಯೋಗದಾತರು ತಮ್ಮ ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಲೇಬೇಕು.
ಸಾಮಾಜಿಕ ಭದ್ರತೆ ವ್ಯಾಪ್ತಿ ವಿಸ್ತರಣೆ: ಈ ಹಿಂದೆ ಯಾವುದೇ ಭದ್ರತೆ ಇಲ್ಲದಿದ್ದ ಗಿಗ್, ಪ್ಲಾಟ್‌ಫಾರ್ಮ್ ಮತ್ತು ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೆ ಈಗ ಪಿಎಫ್, ಇಎಸ್‌ಐಸಿ, ಪಿಂಚಣಿ, ಮತ್ತು ಹೆರಿಗೆ ಪ್ರಯೋಜನಗಳು ಕಡ್ಡಾಯವಾಗಿ ದೊರೆಯಲಿವೆ.
ವೇತನ ಮತ್ತು ಭತ್ಯೆ: ಕನಿಷ್ಠ ವೇತನ ಎಲ್ಲ ಕಾರ್ಮಿಕರಿಗೂ ಅನ್ವಯವಾಗುತ್ತದೆ. ವೇತನವನ್ನು ಸಕಾಲದಲ್ಲಿ ಪಾವತಿಸುವುದು ಈಗ ಕಾನೂನುಬದ್ಧ ಬಾಧ್ಯತೆಯಾಗಿದೆ.
40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಉದ್ಯೋಗದಾತರು ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಬೇಕು. ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ, ಓವರ್‌ಟೈಮ್ (Overtime) ವೇತನವನ್ನು ದ್ವಿಗುಣವಾಗಿ ನೀಡಬೇಕು.
ಉದ್ಯೋಗದಾತರಿಗೆ ಸುಲಭ ಅನುಸರಣೆ
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಸಹಾಯವಾಗುವಂತೆ, ಸಂಹಿತೆಗಳು ಏಕ ನೋಂದಣಿ, ಅಖಿಲ ಭಾರತ ಪರವಾನಗಿ ಮತ್ತು ಏಕ ವಾರ್ಷಿಕ ರಿಟರ್ನ್ ಸೌಲಭ್ಯಗಳ ಮೂಲಕ ವ್ಯವಹಾರಗಳಿಗೆ ಅನುಸರಣೆಯನ್ನು ಸುಗಮಗೊಳಿಸುತ್ತವೆ.
ಸಮಾನ ಪ್ರಯೋಜನ: ‘ಸ್ಥಿರ-ಅವಧಿಯ ಉದ್ಯೋಗಿಗಳಿಗೆ’ (Fixed-term employees) ಕಾಯಂ ಕಾರ್ಮಿಕರಿಗೆ ದೊರೆಯುವ ಎಲ್ಲ ಪ್ರಯೋಜನಗಳು, ರಜೆ ಮತ್ತು ಸಾಮಾಜಿಕ ಭದ್ರತೆ ಸೌಲಭ್ಯಗಳು ದೊರೆಯುತ್ತವೆ.
ಗ್ರಾಚುಟಿ ಅರ್ಹತೆ ಕಡಿತ: ಗ್ರಾಚುಟಿ ಪಡೆಯಲು ಐದು ವರ್ಷಗಳ ನಿರಂತರ ಸೇವೆಯ ನಿಯಮವನ್ನು ಒಂದು ವರ್ಷಕ್ಕೆ ಇಳಿಸಲಾಗಿದೆ.
ಗಿಗ್ ಮತ್ತು ಐಟಿ ಕಾರ್ಮಿಕರಿಗೆ ರಕ್ಷಣೆ
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸದ ವ್ಯಾಖ್ಯಾನ: ಮೊದಲ ಬಾರಿಗೆ, ಗಿಗ್ ಕೆಲಸ, ಪ್ಲಾಟ್‌ಫಾರ್ಮ್ ಕೆಲಸ ಮತ್ತು ಅಗ್ರಿಗೇಟರ್‌ಗಳನ್ನು (Aggregators) ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ.
ಅಗ್ರಿಗೇಟರ್‌ಗಳ ಕೊಡುಗೆ: ಅಗ್ರಿಗೇಟರ್‌ಗಳು ತಮ್ಮ ವಾರ್ಷಿಕ ವಹಿವಾಟಿನ ಶೇ. 1-2 ರಷ್ಟನ್ನು (ಗರಿಷ್ಠ ಮಿತಿ ಶೇ. 5) ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಡ್ಡಾಯವಾಗಿ ಮೀಸಲಿಡಬೇಕು.
ಮಹಿಳಾ ಸಬಲೀಕರಣ: ಎಲ್ಲಾ ವಲಯಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಕಡ್ಡಾಯಗೊಳಿಸಲಾಗಿದೆ ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಆಯ್ಕೆಯನ್ನು ನೀಡಲಾಗಿದೆ.
ಐಟಿ ವಲಯ: ಐಟಿ ಮತ್ತು ಐಟಿಇಎಸ್ (ITES) ಕಾರ್ಮಿಕರಿಗೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ವಲಸೆ ಕಾರ್ಮಿಕರಿಗೆ ಸಮಾನ ವೇತನ, ಕಲ್ಯಾಣ ಪ್ರಯೋಜನಗಳು ಮತ್ತು ಪಿಡಿಎಸ್ ಪೋರ್ಟಬಿಲಿಟಿ ಖಾತ್ರಿಪಡಿಸಲಾಗಿದೆ. ಈ ಹೊಸ ಕಾರ್ಮಿಕ ಸಂಹಿತೆಗಳ ಜಾರಿಯು ಭಾರತದ ಕಾರ್ಮಿಕ ವಲಯಕ್ಕೆ ಒಂದು ಹೊಸ ಯುಗವನ್ನು ಆರಂಭಿಸಲಿದೆ ಎಂದು ಸಚಿವಾಲಯ ಹೇಳಿದೆ. ಕೇಂದ್ರ ಮತ್ತು ರಾಜ್ಯಗಳು ನಿಯಮಗಳನ್ನು ರೂಪಿಸಬೇಕಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ