
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಗೌರವಾರ್ಥವಾಗಿ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಸರ್ಕಾರದ ʼಔತಣಕೂಟ’ದಲ್ಲಿ (State Dinner) ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಭಾಗವಹಿಸಲಿದ್ದಾರೆ. ಆದರೆ, ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸುತ್ತಿಲ್ಲ.
ಸಂಸದ ಶಶಿ ತರೂರ್ ಅವರು ಶುಕ್ರವಾರ ಸಂಜೆ (ಡಿ.೫) ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಮುಖ್ಯಸ್ಥರಿಗೆ ನೀಡುವ ಸೌಜನ್ಯದ ಭಾಗವಾಗಿ ಈ ಆಹ್ವಾನ ಬಂದಿದೆ ಎಂದು ತಿಳಿಸಿದ್ದಾರೆ. ಕಳೆದ ಆರು ತಿಂಗಳಿಂದ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹದಿಂದಾಗಿ ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಸಂಬಂಧ ಹದಗೆಟ್ಟಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಲೋಕಸಭೆಯ ವಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರಿಗೆ ಇದೇ ರೀತಿಯ ಸೌಜನ್ಯವನ್ನು ಏಕೆ ತೋರಿಸಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ತರೂರ್, “ನನಗೆ ಈ ಬಗ್ಗೆ ತಿಳಿದಿಲ್ಲ” ಎಂದಿದ್ದಾರೆ.

ಇನ್ನೊಬ್ಬ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ತರೂರ್ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಿಸಿದ್ದಾರೆ. “ಆಹ್ವಾನ ಕಳುಹಿಸಿದ್ದು ಮತ್ತು ಅದನ್ನು ಸ್ವೀಕರಿಸಿದ್ದು ಆಶ್ಚರ್ಯಕರವಾಗಿದೆ. ಪ್ರತಿಯೊಬ್ಬರ ಆತ್ಮಸಾಕ್ಷಿಗೂ ಒಂದು ಧ್ವನಿ ಇರುತ್ತದೆ. ನನ್ನ ನಾಯಕರಿಗೆ ಆಹ್ವಾನವಿಲ್ಲದಿದ್ದಾಗ… ನನಗೆ ಆಹ್ವಾನವಿದ್ದರೆ… ಈ ಆಟ ಏಕೆ ಆಡಲಾಗುತ್ತಿದೆ, ಯಾರು ಆಡುತ್ತಿದ್ದಾರೆ ಮತ್ತು ನಾವು ಇದರ ಭಾಗವಾಗಬಾರದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಗಾಂಧಿ ಮತ್ತು ಖರ್ಗೆ ಅವರಿಗೆ ಆಹ್ವಾನ ನೀಡದಿರುವುದು, ವಿದೇಶಿ ಮುಖ್ಯಸ್ಥರು ಮತ್ತು ವಿಪಕ್ಷದ ನಾಯಕರ ನಡುವಿನ ಭೇಟಿಗಳನ್ನು ಸರ್ಕಾರವು ನಿರುತ್ಸಾಹಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಒಂದು ದಿನದ ನಂತರ ಸಂಭವಿಸಿದೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದ ಸೇರಿದಂತೆ ಈ ಹಿಂದಿನ ಸಂಪ್ರದಾಯದ ಪ್ರಕಾರ, ವಿದೇಶಿ ಮುಖ್ಯಸ್ಥರು ವಿಪಕ್ಷದ ನಾಯಕರನ್ನು ಭೇಟಿ ಮಾಡುವುದು ಪದ್ಧತಿ. “ಆದರೆ ಇತ್ತೀಚಿನ ದಿನಗಳಲ್ಲಿ… ಸರ್ಕಾರವು ಭೇಟಿಯಾಗದಿರಲು ಸೂಚಿಸುತ್ತದೆ…” ಎಂದು ಹೇಳಿದ್ದರು. ಸರ್ಕಾರಿ ಮೂಲಗಳು ಅಂತಹ ಯಾವುದೇ ‘ಸೂಚನೆ’ ನೀಡಿಲ್ಲ ಎಂದು ಹೇಳಿದ್ದಾರೆ.
ತಿರುವನಂತಪುರಂ ಲೋಕಸಭಾ ಸಂಸದರಾದ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಇತ್ತೀಚೆಗೆ ಮಾಡಿದ ಅನೇಕ ಮೆಚ್ಚುಗೆಯ ಹೇಳಿಕೆಗಳಿಂದಾಗಿ ಕಾಂಗ್ರೆಸ್‌ನಲ್ಲಿ ‘ಸಣ್ಣ ಬಿರುಕು’ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ