ಶಿವಮೊಗ್ಗ : ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ ಹೊಮ್ಮರಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಗರದ ಅಶ್ವತ್ಥ ಬಡಾವಣೆಯ ಅವರ ಮನೆಯಲ್ಲಿ ಘಟನೆ ನಡೆದಿದ್ದು, ತಾಯಿ ಮತ್ತು ಮಗ ಇಬ್ಬರೂ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡಾ. ಜಯಶ್ರೀ (57) ಮತ್ತು ಮಗ ಆಕಾಶ(32) ಇವರಿಬ್ಬರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ದಾವಣೆಗೆರೆ ಜಿಲ್ಲೆಯ ನ್ಯಾಮತಿಯ ಡಾ. ನಾಗರಾಜ ಹೊಮ್ಮರಡಿ ಕುಟುಂಬ, ಶಿವಮೊಗ್ಗದ ಗಾಂಧಿನಗರದಲ್ಲಿ ಹೊಮ್ಮರಡಿ ಆಸ್ಪತ್ರೆಯ ಮೂಲಕ ಹಲವಾರು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿತ್ತು. ಮಕ್ಕಳ ತಜ್ಞರಾಗಿದ್ದ ಡಾ.ನಾಗರಾಜ ಹೊಮ್ಮರಡಿ ಅವರು ಸಹ 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರ ಆಕಾಶ ಅವರ ಪತ್ನಿ ನವ್ಯಶ್ರೀ ಕೂಡ ಒಂದೂವರೆ ವರ್ಷದ ಹಿಂದೆ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಅವರ ಸಾವಿನಿಂದ ಕುಟುಂಬ ಆಘಾತಕ್ಕೆ ಒಳಗಾಗಿತ್ತು ಎಂಬುದು ಡೆತ್ ನೋಟ್ನಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.
ಕಳೆದ ಮೇ ತಿಂಗಳಲ್ಲಿ ಆಕಾಶ ಮತ್ತೊಂದು ಮದುವೆಯಾಗಿದ್ದರು ಎಂದು ಹೇಳಲಾಗಿದ್ದು, ಈಗ ತಾಯಿ-ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ