
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಪಕ್ಷದ ಲೋಕಸಭಾ ಸದಸ್ಯರ ಸಭೆಗೆ ಮತ್ತೊಮ್ಮೆ ಗೈರು ಹಾಜರಾಗಿದ್ದಾರೆ. ಇದರಿಂದಾಗಿ ಅವರು ಇತ್ತೀಚಿನ ವಾರಗಳಲ್ಲಿ ಸತತ ಮೂರನೇ ಬಾರಿಗೆ ಗೈರು ಹಾಜರಾದಂತಾಗಿದೆ. ಸಂಸದ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳ ನಡುವೆ ಇದು ಬಂದಿದೆ.
ವಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ, ಡಿಸೆಂಬರ್ 19 ರಂದು ಸಂಸತ್ತು ಮುಂದೂಡಲ್ಪಡುವ ಮೊದಲು ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮತ್ತು ಬಿಜೆಪಿಯ ಮೇಲಿನ ದಾಳಿಯನ್ನು ತೀಕ್ಷ್ಣಗೊಳಿಸಲು ಕಾಂಗ್ರೆಸ್‌ನ 99 ಸಂಸದರ ಕಾರ್ಯತಂತ್ರದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆದಾಗ್ಯೂ, ತರೂರ್ ಸಭೆಗೆ ಗೈರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೊಗಳಿಕೆಯ ಹೇಳಿಕೆಗಳ ಸರಣಿಯ ನಂತರ ಪಕ್ಷದಿಂದಲೇ ಟೀಕೆಗೆ ಒಳಗಾದ ತಿರುವನಂತಪುರಂ ಸಂಸದ ಶಿಶಿ ತರೂರ್, ಎರಡು ವೈಯಕ್ತಿಕ ಕಾರ್ಯಗಳಿಗಾಗಿ ಕೋಲ್ಕತ್ತಾದಲ್ಲಿರುವುದಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಅವುಗಳೆಂದರೆ ಅವರ ದೀರ್ಘಕಾಲದ ಸಹಾಯಕ ಜಾನ್ ಕೋಶಿ ಅವರ ಮದುವೆ ಮತ್ತು ಅವರ ಸಹೋದರಿ ಸ್ಮಿತಾ ತರೂರ್ ಅವರ ಜನ್ಮದಿನ ಎಂದು ಹೇಳಿದ್ದಾರೆ.ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಶುಕ್ರವಾರದ ಸಭೆಗೆ ಗೈರುಹಾಜರಾಗಿದ್ದಾರೆ.

ತರೂರ್ ಅವರು ಈ ಹಿಂದೆಯೂ ಎರಡು ಸಭೆಗಳಿಗೆ ಗೈರಾಗಿದ್ದಾರೆ. ಅವರು ಗೈರಾದ ಹಿಂದಿನ ಎರಡು ಸಭೆಗಳು ನವೆಂಬರ್‌ನಲ್ಲಿ ನಡೆದಿದ್ದವು.
ನವೆಂಬರ್ 30ರಂದು ನಡೆದ ಸಭೆಯು ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯತಂತ್ರದ ಸಭೆಯಾಗಿತ್ತು. 2020ರ ಆಗಸ್ಟ್‌ನಲ್ಲಿ ಅವರು (ತರೂರ್) ಮತ್ತು ಇತರೆ ಕೆಲವು ನಾಯಕರು ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದರು. ಆದರೆ, ತಾನು ಸಭೆ ತಪ್ಪಿಸಿಲ್ಲ, ಕೇರಳದಿಂದ ವಿಮಾನದಲ್ಲಿ ದೆಹಲಿಗೆ ಬರುತ್ತಿದ್ದೆ ಎಂದು ತರೂರ್ ನಂತರ ಸುದ್ದಿಗಾರರಿಗೆ ತಿಳಿಸಿದ್ದರು. ಅವರ ಕಚೇರಿ ನೀಡಿದ ಹೇಳಿಕೆಯ ಪ್ರಕಾರ, ನಿಗದಿತ ಸಮಯ ಬದಲಾದ ವಿಮಾನದಲ್ಲಿ 90 ವರ್ಷದ ತಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ಕಾರಣ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ ಕೂಡ ಗೈರು ಹಾಜರಾಗಿದ್ದರು.
ನವೆಂಬರ್ 18ರ ಸಭೆಯು ಮತದಾರರ ಮರು-ಪರಿಶೀಲನೆಯ ವಿವಾದಾತ್ಮಕ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್)ಗೆ ಪಕ್ಷದ ವಿರೋಧದ ಕುರಿತು ಚರ್ಚಿಸುವ ಸಭೆಯಾಗಿತ್ತು. ಆ ಸಭೆಗೆ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇತೃತ್ವ ವಹಿಸಿದ್ದರು. ಆಗ ತರೂರ್ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದರು. ಒಂದು ದಿನ ಮೊದಲು ಅವರು ಪ್ರಧಾನಿ ಮಾತನಾಡಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಪ್ರಧಾನಿಯವರ ಭಾಷಣವನ್ನು ಹೊಗಳಿ ಅವರು ಎಕ್ಸ್‌ನಲ್ಲಿ ಹಾಕಿದ ಪೋಸ್ಟ್ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಮತ್ತು ತರೂರ್ ನಡುವೆ ಹೆಚ್ಚುತ್ತಿರುವ ಬಿರುಕು
ಪ್ರಧಾನಿಯವರ ಭಾಷಣಕ್ಕೆ ಶಶಿ ತರೂರ್ ಅವರ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ನಾಯಕರಾದ ಸುಪ್ರಿಯಾ ಶ್ರೀನಾತೆ ಮತ್ತು ಸಂದೀಪ ದೀಕ್ಷಿತ್ ಟೀಕಿಸಿದರು. ಸಂದೀಪ ದೀಕ್ಷಿತ್ ಅವರು, ಪ್ರಧಾನಿಯವರ ಕಾರ್ಯ ವೈಖರಿ ಅಷ್ಟು ಮೆಚ್ಚಿಗೆಯಾಗಿದ್ದರೆ, ತರೂರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಹುದು ಎಂದು ಸೂಚಿಸಿದ್ದರು. ಇದನ್ನು ತರೂರ್ ಅವರು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.
ತರೂರ್ ಇದಕ್ಕೆ ಪ್ರತ್ಯುತ್ತರ ನೀಡಿದ್ದು, ಭಾರತದ ಬಹು-ಪಕ್ಷೀಯ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾಯೋಗಿಕತೆ ಮತ್ತು ಸಮಯೋಚಿತತೆಯ ಅಗತ್ಯದ ಬಗ್ಗೆ ಹೇಳಿದ್ದರು. ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಾಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಪ್ರತಿಸ್ಪರ್ಧಿ ಗುಂಪುಗಳಿಂದ ನಡೆಸಲ್ಪಡುತ್ತವೆ. ತಾವು ಆಯ್ಕೆ ಮಾಡಿದ ಜನರಿಗೆ ಸೇವೆ ಸಲ್ಲಿಸಲು ಸಿದ್ಧರಿರುವ ನಾಯಕರು ಸಿದ್ಧಾಂತಗಳನ್ನು ಮೀರಿ ಸಹಕರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ