ಸೋಲಿಲ್ಲದ ಸರದಾರ, ಅಪರೂಪದ ರಾಜಕಾರಣಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಗೆ ಹುಬ್ಬಳ್ಳಿಯಲ್ಲಿ ಗೌರವ ಸನ್ಮಾನ

(ಅಭಿನಂದನಾ ಸಮಿತಿಯ ಅಧ್ಯಕ್ಷರು ಮತ್ತು ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಮತ್ತು ಗೌರವ ಕಾರ್ಯದರ್ಶಿಗಳಾದ ರಾಜಣ್ಣ ಮೂರುಸಾವಿರಪ್ಪ ಕೊರವಿ ಮತ್ತು ಇತರರು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ೧೩-೧೨-೨೦೨೫ ಸಾಯಂಕಾಲ ೪.೦೦ ಗಂಟೆಗೆ  ಹುಬ್ಬಳ್ಳಿಯ ನೆಹರು ಮೈದಾನದಲ್ಲಿ  ಗೌರವ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ನಿಮಿತ್ತ  ಲೇಖನ)
ರಾಜಕಾರಣದ ಮೂಲಕ ಲೋಕ ಕಲ್ಯಾಣ, ಸಮಾಜಸೇವೆಗೆ ತಮ್ಮನ್ನ ಮುಡಿಪಾಗಿಸಿಕೊಂಡು ನಿಸ್ವಾರ್ಥ ಸೇವೆ ಮೂಲಕ ಜನಮೆಚ್ಚಿದ ನಾಯಕರು ಹಾಗೂ ಮುತ್ಸದ್ದಿಗಳು ಎನಿಸಿಕೊಂಡವರು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿಯೂ ಪಕ್ಷ ನಿಷ್ಠೆ, ಸಿದ್ಧಾಂತ ನಿಷ್ಠೆ ಹಾಗೂ ಬದ್ಧತೆಯುಳ್ಳ ರಾಜಕಾರಣಿ ಎಂದೇ ಹೆಸರಾಗಿರುವ ಬಸವರಾಜ ಹೊರಟ್ಟಿಯವರು ಜನಾನುರಾಗಿ ಹಾಗೂ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ ಕೆಲವು ರಾಜಕಾರಣಿಗಳಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ.
೧೯೮೦ರಿಂದ ಸತತವಾಗಿ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗುತ್ತ ಬರುತ್ತಿರುವ ಬಸವರಾಜ ಹೊರಟ್ಟಿ ಅವರು ರಾಜ್ಯದ ಸಮಸ್ತ ಶಿಕ್ಷಕ ಬಳಗದ ನಂಬಿಗಸ್ಥ ಪರಮೋಚ್ಛ ನಾಯಕರು. ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಶಿಕ್ಷಕರ ಧ್ವನಿಯಾಗಿ, ಶಿಕ್ಷಕರ ಏಳಿಗೆಗಾಗಿ ಮತ್ತು ಉತ್ತರ ಕರ್ನಾಟಕದ ಏಳಿಗೆಗಾಗಿ ಸತತವಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿ ಅವರು, ಹಿಂದೆ ಶಿಕ್ಷಣ ಮಂತ್ರಿಗಳಾಗಿದ್ದಾಗ ಮಾಡಿದ ಕಾರ್ಯಗಳು ಅಜರಾಮರ ಆಗಿವೆ. ಹಿಡಿದ ಕೆಲಸವನ್ನು ಸಾಧಿಸುವ ಛಲಗಾರಿಕೆ ಇರುವ ಅವರಿಗೆ ಹುಟ್ಟು ಹೋರಾಟಗಾರ ಎಂಬು ಬಿರುದು ಕೂಡ ಇದೆ.
ಹಾಲಿ ವಿಧಾನಪರಿಷತ್ತಿನ ಸಭಾಪತಿಗಳಾಗಿರುವ ೮೦ರ ವಯಸ್ಸಿನ ಬಸವರಾಜ ಹೊರಟ್ಟಿಯವರು ಶುದ್ಧಹಸ್ತದ ಪ್ರಾಮಾಣಿಕ ರಾಜಕಾರಣಿಗಳು.  ಇವರು ಹಿಂದಿನ ಅವಿಭಜಿತ ವಿಜಯಪುರ ಜಿಲ್ಲೆಯ ಮುದೋಳ ತಾಲೂಕಿನ ಚಿಕ್ಕಲಗುಂಡಿಯಲ್ಲಿ ೧೪-೦೪-೧೯೪೬ ರಂದು ಜನಿಸಿದರು.  ತಂದೆ ಶಿವಲಿಂಗಪ್ಪ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡ ಹೊರಟ್ಟಿಯವರ ಮುಂದಿನ ಜೀವನಕ್ಕೆ ಆಸರೆಯಾದದ್ದು ಅವರ ಅವ್ವ (ತಾಯಿ).  ಅವ್ವನ ಪ್ರೀತಿ, ಕರುಣೆಗಳ ಅಮೃತವನ್ನುಂಡು ಬೆಳೆದ ಹೊರಟ್ಟಿ ತಮ್ಮ ಊರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪೂರೈಸಿ ಹೆಚ್ಚಿನ ಶಿಕ್ಷಣಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿ, ಬಿ.ಎ. ಮತ್ತು ಎಂ.ಪಿಇಡಿ ಮಾಡಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಸೇರಿದರು.
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಅವರು ವಿಶೇಷವಾಗಿ ಶಿಕ್ಷಕರ ಧ್ವನಿಯಾಗಿ, ಶಿಕ್ಷಕರ ಹಕ್ಕುಗಳಿಗಾಗಿ ಹೋರಾಡ ತೊಡಗಿದಾಗ,  ಶಿಕ್ಷಕ ಸಮುದಾಯದತ್ತ ಅವರ ಬದ್ಧತೆಯನ್ನು ಗಮನಿಸಿ ಇವರನ್ನು ತಮ್ಮ ನಾಯಕರನ್ನಾಗಿ ಆಯ್ಕೆಮಾಡಿಕೊಂಡಿತು. ಶಿಕ್ಷಕ ಸಮುದಾಯ ನಂತರ ೧೯೮೦ರಲ್ಲಿ ಅವರನ್ನು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಿಲ್ಲಿಸಿ ಶಿಕ್ಷಕ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿ ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ ಕಳುಹಿಸಿತು. ಅಂದಿನಿಂದ ಇಂದಿನವರೆಗೆ ೪೫ ವರ್ಷಗಳ ಸುದೀರ್ಘ ಅವಧಿಯವರೆಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುತ್ತ ಬಂದಿರುವ ಸೋಲಿಲ್ಲದ ಸರದಾರ ಹೊರಟ್ಟಿಯವರು ದೇಶದಲ್ಲೇ ಅತೀ ದೀರ್ಘ ಕಾಲ ವಿಧಾನ ಪರಿಷತ್‌ ಸದಸ್ಯರಾದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
೨೦೦೪-೨೦೧೦ ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ೨೦೦೪ ರಿಂದ ೨೦೦೬ ರ ವರೆಗೆ ಅವರು ಅಂದಿನ ಸರ್ಕಾರದಲ್ಲಿ  ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಣ್ಣ ಉಳಿರಾಯ ಖಾತೆ ಸಚಿವರಾಗಿ, ಹಲವಾರು ಜನಪರ ಮತ್ತು ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸಿದರು. ೨೦೦೬-೦೭ ರಲ್ಲಿ ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಅಭಿವೃದ್ಧಿಯನ್ನು ತಂದು ಇಲಾಖೆಯಲ್ಲಿ ನೂತನ ಕ್ರಾಂತಿಯನ್ನು ಮಾಡಿದರು.  ಹೀಗಾಗಿ ಇಂದು ಇಡೀ ರಾಜ್ಯವೇ ಇವರನ್ನು ಶ್ಲಾಘಿಸುತ್ತದೆ.  ಜೊತೆಗೆ ಒಂದು ಬಾರಿ ಹಂಗಾಮಿ ಉಪ-ಸಭಾಪತಿಯಾಗಿಯು ಸೇವೆ ಸಲ್ಲಿಸಿ  ನಂತರ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮಾಜಮುಖಿಯಾಗಿರುವ ಹೊರಟ್ಟಿಯವರು ಹಲವಾರು ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಪರಿಷತ್ತಿನ ಉಪಾಧ್ಯಕ್ಷರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿಯೂ, ರಾಜ್ಯ ಗ್ರಂಥಪಾಲಕರ ಸಂಘದ, ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ, ಆಯಾ-ಸಮಿತಿಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಜೊತೆ ಶಿಕ್ಷಣ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ ಹಾಗೂ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ದೈಹಿಕ ಶಿಕ್ಷಕರ ಮತ್ತು ಗ್ರಂಥಪಾಲಕರ ಧ್ವನಿಯಾಗಿದ್ದ ಹೊರಟ್ಟಿ ಅವರು ಸಾರ್ವಜನಿಕ ಗ್ರಂಥಾಲಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಪರೂಪದ ರಾಜಕಾರಣಿಯಾಗಿ, ಶಿಕ್ಷಕರ ಪಾಲಿನ ಅಕ್ಷಯ ಪಾತ್ರೆ ಮತ್ತು ಶಿಕ್ಷಕರ ಕಣ್ಮಣಿಯಾಗಿರುವ ಹೊರಟ್ಟಿಯವರಿಗೆ ಕೃಷಿಯೆಂದರೆ ಅಚ್ಚು ಮೆಚ್ಚು.  ಪ್ರಾಣಿ ಪ್ರಿಯರು ಹೌದು. ಅವರು ಈ ವಯಸ್ಸಿನಲ್ಲಿಯೂ ಇಂದಿಗೂ ೨೫ರ ತರುಣರಂತೆ ಕ್ರೀಯಾಶೀಲರಾಗಿದ್ದು, ಮಾದರಿಯಾಗಿದ್ದಾರೆ.
ತಾಯಿ ಶ್ರೀಮತಿ ಗುರವ್ವ ಹೆಸರಿನಲ್ಲಿ ‘ಅವ್ವ’ ಸೇವಾ ಟ್ರಸ್ಟ್‌ ಅನ್ನು ೧೫-೧೦-೨೦೧೧ರಲ್ಲಿ ಆರಂಭಿಸಿದರು.  ಆ ಮೂಲಕ ಸಮಾಜ ಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅವರ ಗೃಹ ಕಚೇರಿಯಲ್ಲಿ “ನನ್ನ ಹತ್ತಿರ ಸಹಾಯ ಕೇಳುವ ಬಂದವರಿಗೆ ನಾನು ಇಂದೇ ಸಹಾಯ ಮಾಡುವೆ, ಏಕೆಂದರೆ ನಾಳೆ ನನಗೆ ಸಹಾಯ ಮಾಡಲು ಅವಕಾಶ ಇರಲಿಕ್ಕಿಲ್ಲ ಎಂಬ ನುಡಿ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತಿದೆ.
ನಾಡಿನ ಮಠಾಧೀಶರು, ಸಾಹಿತಿಗಳು, ಪತ್ರಕರ್ತರು, ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಅಧಿಕಾರಿಗಳು, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ನೆನಪಿನ ಶಕ್ತಿ ಅಪಾರ, ಸದನದಲ್ಲಿ ದಾಖಲೆಗಳೊಂದಿಗೆ, ಅಂಕಿ-ಅಂಶಗಳೊಂದಿಗೆ ವಿಷಯಗಳನ್ನು ಮಂಡಿಸುವ ವೈಖರಿ ಎಲ್ಲರಿಗೂ ಅಚ್ಚರಿಗೊಳಿಸುತ್ತಿದೆ. ಪ್ರತಿಭಾವಂತ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ.
 ಕೆ.ಎಸ್. ನಾಗರಾಜ ಅವರ ಸಂಪಾದಕತ್ವದಲ್ಲಿ “ಸದನದಲ್ಲಿ ಹೋರಾಟದ ಹೊರಟ್ಟಿ” ಎಂಬ ೮೦೧ ಪುಟಗಳ ಬೃಹತ್ ಗ್ರಂಥ,  ೨೦೧೨ ರಲ್ಲಿ ಪ್ರಭು ಖಾನಾಪುರೆ ಅವರ ಸಂಪಾಕತ್ವದಲ್ಲಿ “ದಿಟ್ಟ ಹೆಜ್ಜೆ” ಅಭಿನಂದನಾ ಗ್ರಂಥ, ೨೦೨೫ ರಲ್ಲಿ ಡಾ. ಸಂಗಮನಾಥ ಲೋಕಾಪುರ ಅವರ ಸಂಪಾದಕತ್ವದಲ್ಲಿ “ಹೊರಟ್ಟಿ ಅವರ ಹೆಗ್ಗುರುತುಗಳು ಮೈಲುಗಲ್ಲುಗಳೇ ಮಾತಾಡುತ್ತವೆ” ಗ್ರಂಥ  ಪ್ರಕಟವಾಗಿವೆ.
ಪಕ್ಷಾತೀತವಾಗಿ ರಾಜಕೀಯ ನಾಯಕರ ಜೊತೆ ಉತ್ತಮ ಬಾಂಧವ್ಯ ಹಾಗೂ ಗೌರವ ಹೊಂದಿರುವ  ಹೊರಟ್ಟಿ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್. ಪಟೇಲರನ್ನು ಮತ್ತು ಅನೇಕ ಸಮಾಜಮುಖಿ ಹಿರಿಯ ನಾಯಕರನ್ನು ಸ್ಮರಿಸುತ್ತಾ ಮುನ್ನಡೆಯುತ್ತಿದ್ದಾರೆ.
ಹುಬ್ಬಳ್ಳಿಯ ವೇಮನ ಬೀದಿಯಲ್ಲಿರುವ ಅಡವೇಶ್ವರ ಸದನದಲ್ಲಿ ನೆಲೆಸಿರುವ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಹೇಮಲತಾ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಡನೆ ತುಂಬು ಜೀವನ ನಡೆಸುತ್ತಿದ್ದಾರೆ. ಸಾರ್ವಜನಿಕರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡಿರುವ ನೇರ ನಡೆ-ನುಡಿಯ ಹೊರಟ್ಟಿ ಅವರು ಶಿಕ್ಷಕರಿಗಷ್ಟೇ ಅಲ್ಲ, ಎಲ್ಲರಿಗೂ ಅಚ್ಚುಮೆಚ್ಚು.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement