ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬಿಜೆಪಿ ; ಎಡ ಪಕ್ಷಗಳಿಂದ ತಿರುವನಂತಪುರಂ ಮಹಾನಗರ ಪಾಲಿಕೆ ಕಸಿದುಕೊಂಡ ಬಿಜೆಪಿ

ತಿರುವನಂತಪುರಂ: ಭಾರೀ ಕುತೂಹಲ ಕೆರಳಿಸಿದ್ದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ(Kerala local body polls) ಫಲಿತಾಂಶ ಹೊರಬಿದಿದ್ದು, ಆಡಳಿತಾರೂಢ ಎಲ್‌ಡಿಎಫ್‌ಗೆ ಭಾರೀ ಮುಖಭಂಗವಾಗಿದೆ.ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಇದೇ ಮೊದಲ ಬಾರಿಗೆ ಐತಿಹಾಸಿಕ ವಿಜಯ ಸಾಧಿಸಿದೆ. ಪಾಲಿಕೆಯ 101 ವಾರ್ಡ್‌ಗಳಲ್ಲಿ ಎನ್‌ಡಿಎ ಒಟ್ಟು 50 ವಾರ್ಡ್‌ಗಳಲ್ಲಿ ಗೆಲುವು ದಾಖಲಿಸಿದೆ.
ಕೇರಳ ರಾಜ್ಯ ಚುನಾವಣಾ ಆಯೋಗ (SEC) ನೀಡಿರುವ ಮಾಹಿತಿಯ ಪ್ರಕಾರ, ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (LDF) ಕೇವಲ 29 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF) 19 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಎರಡು ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಸ್ವತಂತ್ರ ಅಭ್ಯರ್ಥಿಯ ನಿಧನದ ಕಾರಣ ವಿಝಿಂಜಂನಲ್ಲಿ ಮತದಾನವನ್ನು ಮುಂದೂಡಲಾಗಿದೆ.

ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಜೊತೆಗೆ ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಿಂತ ಮೊದಲು ನಡೆದ ಈ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಆಳಿತಾರೂಢ ಎಲ್‌ಡಿಎಫ್‌ಗೆ ಭಾರೀ ಹಿನ್ನಡೆಯಾಗಿದೆ.
2020ರ ಚುನಾವಣೆಯಲ್ಲಿ ಏನಾಗಿತ್ತು?
2020 ರಲ್ಲಿ ನಡೆದ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ, ಎಲ್‌ಡಿಎಫ್ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ, 52 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿತ್ತು. ಆಗಲೂ ಎನ್‌ಡಿಎ ಉತ್ತಮ ಪ್ರದರ್ಶನ ನೀಡಿ, ಬಿಜೆಪಿ ನೇತೃತ್ವದ ಮೈತ್ರಿಕೂಟವು 33 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು. ಯುಡಿಎಫ್ ಆಗ ಕೇವಲ 10 ವಾರ್ಡ್‌ಗಳನ್ನು ಗೆದ್ದಿತ್ತು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ತಿರುವನಂತಪುರಂ ಜಿಲ್ಲೆಯು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರ ತವರು ಕ್ಷೇತ್ರವಾಗಿರುವುದರಿಂದ ಈ ಫಲಿತಾಂಶವು ರಾಜಕೀಯವಾಗಿ ಮಹತ್ವದ್ದಾಗಿದೆ, ಇದು ಕೇರಳದ ರಾಜಧಾನಿಯಲ್ಲಿ ಬಿಜೆಪಿಯ ಪ್ರಗತಿಯ ಪ್ರಮಾಣವನ್ನು ಒತ್ತಿಹೇಳುತ್ತದೆ. ಒಟ್ಟಾರೆಯಾಗಿ, ಈ ಫಲಿತಾಂಶಗಳು ಕೇರಳದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳುತ್ತಿದೆ ಎಂದು ಸೂಚಿಸುತ್ತದೆ. ಈ ಗೆಲುವು ತಿರುವನಂತಪುರಂನಲ್ಲಿ ಎಲ್‌ಡಿಎಫ್‌ನ ದಶಕಗಳ ಪ್ರಾಬಲ್ಯವನ್ನು ಕೊನೆಗೊಳಿಸಿದೆ ಮತ್ತು ನಗರ ಮತದಾರರ ಭಾವನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.

1995ರ ನಂತರ ಕೇರಳದಲ್ಲಿ ಅತಿ ಹೆಚ್ಚು ಮತದಾನ
ಕೇರಳ ರಾಜ್ಯ ಚುನಾವಣಾ ಆಯೋಗದ (SEC) ಪ್ರಕಾರ, ಈ ವರ್ಷದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೇರಳದಲ್ಲಿ ಶೇಕಡಾ 73.69 ರಷ್ಟು ಮತದಾನ ದಾಖಲಿಸುವ ಮೂಲಕ 1995ರ ನಂತರದಲ್ಲಿ ಅತಿ ಹೆಚ್ಚು ಮತದಾನಕ್ಕೆ ಸಾಕ್ಷಿಯಾಗಿದೆ.
ಡಿಸೆಂಬರ್ 9 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 70.91 ರಷ್ಟು ಮತದಾನವಾಗಿತ್ತು. ಹಾಗೂ ಡಿಸೆಂಬರ್ 11 ರಂದು ನಡೆದ ಎರಡನೇ ಹಂತದಲ್ಲಿ ಶೇ. 76.08 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗುರುವಾರ ಹೇಳಿಕೆ ನೀಡಿದ ಕೇರಳ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಎ. ಷಾಜಹಾನ್ ಅವರು, ರಾಜ್ಯಾದ್ಯಂತ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಹಸಿರು ಪ್ರೋಟೋಕಾಲ್ (Green Protocol) ಮತ್ತು ಮಾದರಿ ನೀತಿ ಸಂಹಿತೆ (MCC) ಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದೂ ಅವರು ಹೇಳಿದರು. ಮತದಾರರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಅವರು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement