
ನವದೆಹಲಿ: ನೂತನವಾಗಿ ನೇಮಕಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ನಿತಿನ್ ನಬಿನ್ ಅವರು ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಮತ್ತು ಇತರೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ನಬಿನ್ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಶಾ, ನಡ್ಡಾ ಅವರಲ್ಲದೆ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ, ರವಿಶಂಕರ ಪ್ರಸಾದ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಹಲವು ಗಣ್ಯರು ಅವರನ್ನು ಪಕ್ಷದ ಕಛೇರಿಯಲ್ಲಿ ಸ್ವಾಗತಿಸಿದರು.
ನಬಿನ್ (45) ಅವರು ದಿವಂಗತ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ನಬಿನ್ ಕಿಶೋರಪ್ರಸಾದ ಸಿನ್ಹಾ ಅವರ ಪುತ್ರ. ಅವರು ಕ್ರಿಯಾಶೀಲರು, ಸೈದ್ಧಾಂತಿಕ ಬದ್ಧತೆ ಹೊಂದಿದವರು ಮತ್ತು ಸಂಘಟನೆಯ ಬಗ್ಗೆ ಆಳವಾದ ಸಮರ್ಪಣೆ ಹೊಂದಿದ್ದಾರೆ ಎಂದು ಪಕ್ಷದ ನಾಯಕರು ಬಣ್ಣಿಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯಿಂದ ಬಂದವರು.

ಐದು ಬಾರಿ ಶಾಸಕರಾಗಿರುವ ನಿತಿನ್ ನಬಿನ್ ಅವರು ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಬಿಹಾರ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಸಚಿವರಾಗಿ ಮತ್ತು ಛತ್ತೀಸ್‌ಗಢದ ಪಕ್ಷದ ಉಸ್ತುವಾರಿಯಾಗಿ ಅವರ ಅವಧಿಗಳು ಅತ್ಯುತ್ತಮವಾಗಿವೆ ಮತ್ತು ಅವರ ಪರಿಣಾಮಕಾರಿ ಸಾಂಸ್ಥಿಕ ನಾಯಕತ್ವದಿಂದ ಗುರುತಿಸಲ್ಪಟ್ಟಿವೆ ಎಂದು ನಾಯಕರು ತಿಳಿಸಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿಯು ನಬಿನ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದೆ. ಪ್ರಸ್ತುತ ಅವರು ಬಿಹಾರದ ಲೋಕೋಪಯೋಗಿ ಸಚಿವರಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಅವರು ಹೊರಡಿಸಿದ ಅಧಿಸೂಚನೆಯಲ್ಲಿ, “ಬಿಹಾರ ಸರ್ಕಾರದ ಸಚಿವರಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ,” ಎಂದು ಹೇಳಿದ್ದಾರೆ.
ಜೆ.ಪಿ. ನಡ್ಡಾ ಅವರು ಜನವರಿ 2020 ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಮತ್ತು ಈಗಾಗಲೇ ತಮ್ಮ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಮೂಲಕ ಪಕ್ಷವನ್ನು ಮುನ್ನಡೆಸಲು ಅವರಿಗೆ ವಿಸ್ತರಣೆಯನ್ನು ನೀಡಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ