ನಡು ರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ ; ಪತ್ನಿ ಅಂಗಲಾಚಿ ಬೇಡಿಕೊಂಡರೂ ನೆರವಿಗೆ ಬಾರದ ಜನ…!

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನಿಗೆ ನಡುರಸ್ತೆಯಲ್ಲೇ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಂತೆ ಆತನ ಪತ್ನಿ ಎಷ್ಟೇ ಅಂಗಲಾಚಿದರೂ ಯಾರೂ ನೆರವಿಗೆ ಬಾರದ ಅಮಾನವೀಯ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಬೈಕ್ ಮೇಲೆ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡಿದರೂ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ದಕ್ಷಿಣ ಬೆಂಗಳೂರಿನ ಬಾಲಾಜಿ ನಗರದ ನಿವಾಸಿ, ಗ್ಯಾರೇಜ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟರಮಣನ್ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ಸುಮಾರು 3:30ರ ಸುಮಾರಿಗೆ ವೆಂಕಟರಮಣನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಪತ್ನಿ ಬೈಕ್ ಮೇಲೆ ಪತಿಯನ್ನು ಕೂರಿಸಿಕೊಂಡು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಆಸ್ಪತ್ರೆಗೆ ತೆರಳಿದ್ದಾರೆ.

ಅಲ್ಲಿ ಇಸಿಜಿ (ECG) ಮಾಡಲಾಗಿದ್ದು, ಅವರಿಗೆ ಲಘು ಹೃದಯಾಘಾತವಾಗಿರುವುದು ದೃಢಪಟ್ಟಿದೆ. ಆದರೆ ಅಲ್ಲಿಯೂ ತುರ್ತು ಚಿಕಿತ್ಸೆ ನೀಡುವ ಬದಲಿಗೆ ಜಯನಗರದ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಅಲ್ಲಿಯೂ ಆಂಬ್ಯುಲೆನ್ಸ್ ಸಿಗದ ಕಾರಣ ಬೈಕ್‌ನಲ್ಲಿಯೇ ಆಸ್ಪತ್ರೆಗೆ ಹೊರಟಿದ್ದರು ಎನ್ನಲಾಗಿದೆ.
ಪತಿಯನ್ನು ಬೈಕ್‌ನಲ್ಲಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮತ್ತೆ ಹೃದಯಾಘಾತ ಸಂಭವಿಸಿ ಅವರು ಕುಸಿದುಬಿದ್ದಿದ್ದಾರೆ. ರಸ್ತೆ  ಮೇಲೆ ಬಿದ್ದು ವೆಂಕಟರಮಣನ್ ನೋವಿನಿಂದ ಒದ್ದಾಡುತ್ತಿದ್ದರೆ, ಅವರ ಪತ್ನಿ ದಾರಿಯಲ್ಲಿ ಹೋಗುವ ವಾಹನ ಸವಾರರ ಮುಂದೆ ಕೈಮುಗಿದು ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ಕೊನೆಗೆ ಕ್ಯಾಬ್ ಚಾಲಕನೊಬ್ಬ ಸಹಾಯಕ್ಕೆ ಧಾವಿಸಿ ವೆಂಕಟರಮಣನ್ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ವೆಂಕಟರಮಣನ್ ಅವರಿಗೆ ಐದು ವರ್ಷದ ಮಗ ಹಾಗೂ 18 ತಿಂಗಳ ಹೆಣ್ಣು ಮಗುವಿದೆ. ಇಷ್ಟೆಲ್ಲಾ ನೋವಿನ ನಡುವೆಯೂ ಕುಟುಂಬಸ್ಥರು ಔದಾರ್ಯ ಮೆರೆದಿದ್ದಾರೆ. ವೆಂಕಟರಮಣನ್ ಅವರ ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement