ಶ್ಯಾಮ್ಲಿ (ಉತ್ತರ ಪ್ರದೇಶ): ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ, ಶವಗಳನ್ನು ಸ್ವಂತ ಮನೆಯಲ್ಲೇ ಹೂತುಹಾಕಿರುವ ಭೀಕರ ಘಟನೆ ಉತ್ತರ ಪ್ರದೇಶದ ಶ್ಯಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆರೋಪಿ ಫಾರೂಕ್ ಎಂಬಾತನ ಪತ್ನಿ ತಾಹಿರಾ (35), ಮತ್ತು ಮಕ್ಕಳಾದ ಶರೀನ್ (14) ಹಾಗೂ ಆಫ್ರೀನ್ (6) ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದರು. ಗ್ರಾಮದ ಮುಖ್ಯಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಆರಂಭಿಸಿದ ಪೊಲೀಸರಿಗೆ ಫಾರೂಕ್ ನಡವಳಿಕೆಯ ಮೇಲೆ ಅನುಮಾನ ಬಂದಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಚ್ಚಿಬೀಳಿಸುವ ಸತ್ಯ ಒಪ್ಪಿಕೊಂಡ ಆರೋಪಿ
ಪೊಲೀಸ್ ವಿಚಾರಣೆಯ ವೇಳೆ ಫಾರೂಕ್ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಶವಗಳನ್ನು ಮನೆಯೊಳಗೆ ಗುಂಡಿ ತೆಗೆದು ಹೂತುಹಾಕಿರುವುದಾಗಿ ತಿಳಿಸಿದ್ದಾನೆ. ಮಾಹಿತಿ ತಿಳಿದ ಕೂಡಲೇ ಎಸ್‌ಪಿ ಎನ್.ಪಿ ಸಿಂಗ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, ಮನೆಯೊಳಗಿನ ಗುಂಡಿಯಿಂದ ಮೂರು ಶವಗಳನ್ನು ಹೊರತೆಗೆದಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಒಂದು ತಿಂಗಳ ಹಿಂದೆ ಪತ್ನಿ ತಾಹಿರಾ ಯಾವುದೋ ಕೆಲಸಕ್ಕಾಗಿ ಹಣ ಕೇಳಿದ್ದರು. ಈ ವೇಳೆ ದಂಪತಿ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ತಾಹಿರಾ ಬುರ್ಖಾ ಧರಿಸದೆಯೇ ತನ್ನ ತವರು ಮನೆಗೆ ತೆರಳಿದ್ದರು. ಬುರ್ಕಾ ಇಲ್ಲದೆ ಹೊರಗೆ ಹೋಗಿದ್ದು ತನ್ನ “ಗೌರವಕ್ಕೆ ಧಕ್ಕೆ ತಂದಿದೆ” ಎಂದು ಭಾವಿಸಿದ ಫಾರೂಕ್, ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಒಂದು ತಿಂಗಳ ನಂತರ ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕರೆತಂದು ಅಮಾನವೀಯವಾಗಿ ಹತ್ಯೆ ಮಾಡಿದ್ದು, ನಂತರ ಮನೆಯ ಅಂಗಳದಲ್ಲಿ ಶೌಚಾಲಯಕ್ಕಾಗಿ ಮೊದಲೇ ಅಗೆದಿದ್ದ ಗುಂಡಿಯಲ್ಲಿ ಮೂವರ ಶವಗಳನ್ನು ಹೂಳಿದ್ದಾನೆ ಎನ್ನಲಾಗಿದೆ.
ಆರೋಪಿ ಫಾರೂಕ್‌ನನ್ನು ಪೊಲೀಸರು ಬಂಧಿಸಿದ್ದು, ಹತ್ಯೆಗೆ ಬಳಸಿದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಿಂದ ಇದು ಕೌಟುಂಬಿಕ ಕಲಹದಿಂದ ನಡೆದ ಹತ್ಯೆ ಎಂದು ತಿಳಿದುಬಂದಿದೆ. ಮೂರೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಭೀಕರ ತ್ರಿವಳಿ ಕೊಲೆ ಪ್ರಕರಣ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ