ಉಡುಪಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ, ಮತ್ತೋರ್ವ ಆರೋಪಿ ಬಂಧನ

ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ ನೌಕರರು ಭಾರತದ ನೌಕಾಪಡೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅಕ್ರಮವಾಗಿ ಶೇರ್ ಮಾಡಿ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತಿನ ಆನಂದ ತಾಲೂಕಿನ ಕೈಲಾಸ ​ನಗರದ ಹೀರೇಂದ್ರಕುಮಾರ (34) ಬಂಧಿತ ಆರೋಪಿಯಾಗಿದ್ದಾನೆ.  ಈ ಪ್ರಕರಣದಲ್ಲಿ ಈಗ  ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್​ 21ರಂದು  ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು.
ರೋಹಿತ್ ಮತ್ತು ಸಂತ್ರಿ ಮಲ್ಪೆಯ ಶಿಪ್‌ಯಾರ್ಡ್‌ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳಗೌಪ್ಯ ಮಾಹಿತಿಯನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನಕ್ಕೆ ಅಕ್ರಮವಾಗಿ ಹಂಚಿಕೊಂಡು ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ತಂಡವು ಆರೋಪಿಗಳಿಗೆ ಮೊಬೈಲ್ ಸಿಮ್ ಕಾರ್ಡ್​​ ಒದಗಿಸಿದ ಆರೋಪದ ಮೇಲೆ ಹೀರೇಂದ್ರ ಕುಮಾರ್‌ನನ್ನು ಬಂಧಿಸಿದೆ. ಈತ ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಪಡೆದು ಆರೋಪಿಗಳಿಗೆ ನೀಡಿದ್ದ. ಈತನನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement