
ಬೆಂಗಳೂರು : ಜನವರಿ 29ರಿಂದ ಫೆಬ್ರವರಿ 06ರವರೆಗೆ ಆಯೋಜಿಸಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಅದರ ರಾಯಭಾರಿಯಾಗಿ ( (Brand Ambassador) ಹಿರಿಯ ಚಲನಚಿತ್ರ ನಟ ಪ್ರಕಾಶ ರಾಜ (Prakash Raj) ಅವರನ್ನು ನೇಮಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಚಲನಚಿತ್ರೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮಹಿಳಾ ಸಬಲೀಕರಣ ಕುರಿತಾದ ಥೀಮ್ ಇರಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ.
ಈ ಮೂರು ಸ್ಪರ್ಧಾ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಕಡೆಯ ದಿನಾಂಕವಾಗಿರುತ್ತದೆ. 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಜಾಜಿನಗರದ ಲುಲು ಮಾಲ್, . ರಾಜಕುಮಾರ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಚಲನಚಿತ್ರಗಳ ಪ್ರದರ್ಶನವಿರಲಿದೆ. ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ ಎಂದು ಹೇಳಿದರು.
2025-26 ನೇರ ಸಾಲಿನ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಡಿಸಲು 7 ಕೋಟಿ ರೂಪಾಯಿಗಳ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ಆಯುಕ್ತರಾದ ಹೇಮಂತ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಹಾಗೂ ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ