ಕ್ಯಾಲಿಫೋರ್ನಿಯಾ (ಅಮೆರಿಕ) : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಕಾರ್ಲೋಸ್ ನಗರದ ನೂತನ ಮೇಯರ್ ಆಗಿ ಭಾರತೀಯ ಮೂಲದ ಪ್ರಣೀತಾ ವೆಂಕಟೇಶ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಅವರು ಈ ನಗರದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎನಿಸಿಕೊಂಡಿದ್ದಾರೆ ಮತ್ತು ಈ ಸ್ಥಾನಕ್ಕೇರಿದ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ‘ದಿ ಅಮೇರಿಕನ್ ಬಜಾರ್’ ವರದಿ ಮಾಡಿದೆ.
ಪ್ರಣೀತಾ ಅವರು ಫಿಜಿಯಲ್ಲಿ ನೆಲೆಸಿದ್ದ ಭಾರತೀಯ ದಂಪತಿಗೆ ಜನಿಸಿದ್ದಾರೆ. ಅವರಿಗೆ ನಾಲ್ಕು ವರ್ಷವಿರುವಾಗ ಅವರ ಕುಟುಂಬ ಅಮೆರಿಕದ ಕ್ಯಾಲಿಫೋರ್ನಿಯಾಗೆ ವಲಸೆ ಬಂದಿತು. 2022 ರಲ್ಲಿ ಪ್ರಣೀತಾ ಅವರು ಸ್ಯಾನ್ ಕಾರ್ಲೋಸ್ ನಗರ ಸಭೆಗೆ (ಸಿಟಿ ಕೌನ್ಸಿಲ್) ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಮೂರು ವರ್ಷಗಳ ಕಾಲ ನಗರದ ಆರ್ಥಿಕ ಅಭಿವೃದ್ಧಿ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.
2009 ರಿಂದ ಸ್ಯಾನ್ ಕಾರ್ಲೋಸ್ನಲ್ಲಿ ವಾಸಿಸುತ್ತಿರುವ ಇವರು, ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ನಗರದಲ್ಲಿ ‘ಮಾಂಟೆಸ್ಸರಿ ಪ್ರಿಸ್ಕೂಲ್’ ನಡೆಸುತ್ತಿದ್ದಾರೆ.
ಐತಿಹಾಸಿಕ ಜಯ
ಡಿಸೆಂಬರ್ 8 ರಂದು ನಡೆದ ಪಾಲಿಕೆ ಸಭೆಯಲ್ಲಿ ಪ್ರಣೀತಾ ಅವರನ್ನು ಅವಿರೋಧವಾಗಿ ಮೇಯರ್ ಆಗಿ ಆಯ್ಕೆ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಅಮೆರಿಕದ ಫಿಜಿ ಟ್ರೇಡ್ ಕಮಿಷನ್, “ನಮಗೂ ಆಡಳಿತದಲ್ಲಿ ಪ್ರಾತಿನಿಧ್ಯವಿದೆ ಎಂಬ ಪ್ರಬಲ ಸಂದೇಶವನ್ನು ಪ್ರಣೀತಾ ಅವರ ಸಾಧನೆ ಸಾರುತ್ತಿದೆ” ಎಂದು ಹೇಳಿದೆ.
ಸಮಾಜಮುಖಿ ಚಿಂತನೆ
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಪ್ರಣೀತಾ, “ನಮ್ಮ ಪರಂಪರೆಯನ್ನು ಗೌರವಿಸುತ್ತಾ ಇತರರ ಸಂಸ್ಕೃತಿಯನ್ನು ಪ್ರೀತಿಸುವ ಸಮಯವಿದು. ಸಮುದಾಯದ ಅಗತ್ಯತೆಗಳನ್ನು ಸರ್ಕಾರದ ಯೋಜನೆಗಳೊಂದಿಗೆ ಜೋಡಿಸುವುದು ನನ್ನ ಗುರಿ,” ಎಂದರು. ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಕಲ್ಯಾಣದ ಆಧಾರದ ಮೇಲೆ ಅವರು ತಮ್ಮ ಚುನಾವಣಾ ಪ್ರಚಾರ ನಡೆಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ