ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಭಾನುವಾರ ಕಾಂಗ್ರೆಸ್ ಪ್ರಧಾನ ಕಚೇರಿಯಾದ ಇಂದಿರಾ ಭವನದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ವೈಯಕ್ತಿಕವಾಗಿ ಭೇಟಿಯಾದರು. ಅವರ ಸಂಕ್ಷಿಪ್ತ ಮಾತುಕತೆ ಶೀಘ್ರದಲ್ಲೇ ಪಕ್ಷದ ವಲಯಗಳಲ್ಲಿ ಚರ್ಚೆಯ ವಿಷಯವಾಯಿತು.
ಭಾನುವಾರ ಇಂದಿರಾ ಭವನದಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ನಂತರ, ನಾಯಕರೆಲ್ಲರೂ ಚಹಾ ಮತ್ತು ಉಪಾಹಾರಕ್ಕಾಗಿ ಸೇರಿದ್ದಾಗ ಈ ಪ್ರಸಂಗ ನಡೆಯಿತು. ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರ ಸಮ್ಮುಖದಲ್ಲೇ ರಾಹುಲ್ ಗಾಂಧಿ ಅವರು ದಿಗ್ವಿಜಯ ಸಿಂಗ್ ಅವರತ್ತ ನೋಡಿ, “ನಿನ್ನೆ ನೀವು ಸರಿಯಾಗಿ (Misbehaved) ನಡೆದುಕೊಳ್ಳಲಿಲ್ಲ! ಎಂದು ತಮಾಷೆ ಮಾಡಿದರು. ರಾಹುಲ್ ಅವರ ಈ ಮಾತಿನಿಂದ ಅಲ್ಲಿ ನೆರೆದಿದ್ದ ನಾಯಕರೆಲ್ಲರೂ ನಗೆಗಡಲಲ್ಲಿ ತೇಲಿದರು.
ವಿವಾದಕ್ಕೆ ಕಾರಣವಾಗಿದ್ದ ಪೋಸ್ಟ್:
ರಾಹುಲ್ ಗಾಂಧಿ ಅವರ ಈ ಹಾಸ್ಯದ ಹಿಂದೆ ಶನಿವಾರ ನಡೆದ ಒಂದು ಪ್ರಸಂಗದ ಹಿನ್ನೆಲೆಯಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೂ ಮುನ್ನ ದಿಗ್ವಿಜಯ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಎಲ್.ಕೆ. ಅಡ್ವಾಣಿ ಅವರ ಪಾದದ ಬಳಿ ಕುಳಿತಿರುವ ಹಳೆಯ ಫೋಟೋವನ್ನು ಸಿಂಗ್ ಹಂಚಿಕೊಂಡಿದ್ದರು.
ಈ ಚಿತ್ರ ನನಗೆ ಸಿಕ್ಕಿತು. ಇದು ತುಂಬಾ ಪ್ರಭಾವಶಾಲಿಯಾಗಿದೆ. ಒಬ್ಬ ಜನಸಂಘ ಮತ್ತು ಬಿಜೆಪಿ ಕಾರ್ಯಕರ್ತ, ನಾಯಕರ ಪಾದಗಳ ಬಳಿಗೆ ನೆಲದ ಮೇಲೆ ಕುಳಿತು, ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾದರು. ಇದು ಸಂಘಟನೆಯ ಶಕ್ತಿಗೆ ಸಾಕ್ಷಿ ಎಂದು ಬರೆದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಶಿಸ್ತನ್ನು ಹೊಗಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, “ಗಾಂಧೀಜಿಯವರ ಸಂಘಟನೆಗೆ ಗೋಡ್ಸೆ ಸಂಘಟನೆಯಿಂದ ಪಾಠ ಕಲಿಯುವ ಅಗತ್ಯವಿಲ್ಲ” ಎಂದು ಟಾಂಗ್ ನೀಡಿದ್ದರು. ನಂತರ ದಿಗ್ವಿಜಯ ಸಿಂಗ್ ಅವರು, “ನಾನು ಕೇವಲ ಸಂಘಟನಾ ಶಕ್ತಿಯ ಬಗ್ಗೆ ಮಾತನಾಡಿದ್ದೇನೆ ಹೊರತು ಅವರ ಸಿದ್ಧಾಂತವನ್ನಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ:
ಇದೇ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್ ಅವರ ವಿವಾದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದರು. “ಕಾಂಗ್ರೆಸ್ ಮುಗಿದುಹೋಯಿತು ಎನ್ನುವವರಿಗೆ ನಾನೊಂದು ಮಾತು ಹೇಳುತ್ತೇನೆ. ನಮ್ಮಲ್ಲಿ ಅಧಿಕಾರ ಕಡಿಮೆ ಇರಬಹುದು, ಆದರೆ ನಮ್ಮ ಬೆನ್ನೆಲುಬು ಇಂದಿಗೂ ಗಟ್ಟಿಯಾಗಿದೆ. ನಾವು ಸಂವಿಧಾನ, ಜಾತ್ಯತೀತತೆ ಮತ್ತು ಬಡವರ ಹಕ್ಕುಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ,” ಎಂದು ಖರ್ಗೆ ಗುಡುಗಿದರು.
ಅಲ್ಲದೆ, “ನಾವು ಎಂದಿಗೂ ಧರ್ಮದ ಹೆಸರಿನಲ್ಲಿ ಮತ ಕೇಳಿಲ್ಲ ಅಥವಾ ದೇವಸ್ಥಾನ-ಮಸೀದಿ ಹೆಸರಲ್ಲಿ ದ್ವೇಷ ಹರಡಿಲ್ಲ. ಬಿಜೆಪಿ ಧರ್ಮವನ್ನು ರಾಜಕೀಯವಾಗಿ ಬಳಸುತ್ತಿದೆ. ಆದರೆ ಸತ್ಯ ನಮ್ಮ ಬಳಿ ಇದೆ. ಸಿದ್ಧಾಂತಗಳಿಗೆ ಸಾವಿಲ್ಲ,” ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಟ್ಟಾರೆಯಾಗಿ, ಕಾಂಗ್ರೆಸ್‌ನ ಸಂಸ್ಥಾಪನಾ ದಿನವು ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕರ ನಡುವಿನ ಸ್ನೇಹಪರ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ