ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ, ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅನೇಕ ಮಾಧ್ಯಮ ವರದಿಗಳ ಪ್ರಕಾರ, ಇವರಿಬ್ಬರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ರೈಹಾನ್ ವಾದ್ರಾ ಅವರು ಅವಿವಾ ಬೇಗ್‌ಗೆ ವಿವಾಹದ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಅವಿವಾ ಅದನ್ನು ಒಪ್ಪಿಕೊಂಡಿದ್ದಾರೆ. ಈ ನಿಶ್ಚಿತಾರ್ಥಕ್ಕೆ ಗಾಂಧಿ ಮತ್ತು ವಾದ್ರಾ ಕುಟುಂಬ ಹಾಗೂ ಬೇಗ್ ಕುಟುಂಬದವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
ಯಾರು ಈ ಅವಿವಾ ಬೇಗ್?
ವರದಿಗಳ ಪ್ರಕಾರ, ಅವಿವಾ ಬೇಗ್ ಅವರು ಕೇವಲ ಸೆಲೆಬ್ರಿಟಿ ಕುಟುಂಬದ ಭಾಗವಾಗುತ್ತಿರುವುದು ಮಾತ್ರವಲ್ಲದೆ, ಸ್ವಂತ ಪರಿಶ್ರಮದಿಂದ ಗುರುತಿಸಿಕೊಂಡಿದ್ದಾರೆ. ದೆಹಲಿ ಮೂಲದವರಾದ ಅವಿವಾ ಬೇಗ್, ದೆಹಲಿಯ ಪ್ರತಿಷ್ಠಿತ ಮಾಡರ್ನ್ ಸ್ಕೂಲ್ ವಿದ್ಯಾರ್ಥಿನಿ. ಅವಿವಾ ಬೈಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ. ಅವರ ತಂದೆ ಇಮ್ರಾನ್ ಬೇಗ್ ಒಬ್ಬ ಉದ್ಯಮಿ. ತಾಯಿ ನಂದಿತಾ ಬೇಗ್ ಇಂಟೀರಿಯರ್ ಡಿಸೈನರ್ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಒ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಿಂದ ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (Media Communication and Journalism) ಪದವಿ ಪಡೆದಿದ್ದಾರೆ.
ಇವರು ‘ಅಟೆಲಿಯರ್ 11’ (Atelier 11) ಎಂಬ ಫೋಟೋಗ್ರಾಫಿಕ್ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಕಂಪನಿಯ ಸಹ-ಸ್ಥಾಪಕಿ. ಈ ಸಂಸ್ಥೆಯು ಭಾರತದಾದ್ಯಂತ ದೊಡ್ಡ ಬ್ರ್ಯಾಂಡ್‌ಗಳು ಮತ್ತು ಗ್ರಾಹಕರೊಂದಿಗೆ ಕೆಲಸ ಮಾಡುತ್ತದೆ.
ಅವಿವಾ ಒಬ್ಬ ಪ್ರತಿಭಾವಂತ ಫೋಟೋಗ್ರಾಫರ್. ಇವರ ಛಾಯಾಚಿತ್ರಗಳು ದೈನಂದಿನ ಜೀವನದ ಸರಳತೆ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುತ್ತವೆ. ಕಳೆದ ಐದು ವರ್ಷಗಳಲ್ಲಿ ಇವರು ‘ಇಂಡಿಯಾ ಆರ್ಟ್ ಫೇರ್’ ಸೇರಿದಂತೆ ಹಲವು ಕಲಾ ಪ್ರದರ್ಶನಗಳಲ್ಲಿ ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಕೇವಲ ಕಲೆ ಮಾತ್ರವಲ್ಲದೆ, ಇವರು ರಾಷ್ಟ್ರಮಟ್ಟದ ಮಾಜಿ ಫುಟ್‌ಬಾಲ್ ಆಟಗಾರ್ತಿ ಕೂಡ ಹೌದು.
ಅವಿವಾ ಬೇಗ್ ಅವರು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 11,000 ಅನುಯಾಯಿಗಳನ್ನು ಹೊಂದಿದ್ದಾರೆ. ತಮ್ಮ ಸೃಜನಶೀಲ ಕೆಲಸಗಳು ಮತ್ತು ಜೀವನಶೈಲಿಯ ಚಿತ್ರಗಳನ್ನು ಅವರು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ