ಬೆಂಗಳೂರು : ಆನ್‌ಲೈನ್ – ಆಫ್‌ಲೈನ್ ಬೆಟ್ಟಿಂಗ್ ಆರೋಪದ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ವಿಶೇಷ ನ್ಯಾಯಾಧೀಶರಾದ ಗಜಾನನ ಭಟ್ ಮಂಗಳವಾರ (ಡಿಸೆಂಬರ್ 30) ಪ್ರಕಟಿಸಿದರು. 5 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು, ಪಾಸ್‌ಪೋರ್ಟ್ ಅನ್ನು ಸಕ್ಷಮ ನ್ಯಾಯಾಲಯಕ್ಕೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಆಗಸ್ಟ್ 23ರಂದು ಬಂಧಿತರಾಗಿದ್ದ ವೀರೇಂದ್ರ ಪಪ್ಪಿ ವಿರುದ್ಧ ಅಕ್ಟೋಬರ್ 18ರಂದು ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪ ಪಟ್ಟಿ ಸಲ್ಲಿಸಿತ್ತು.
ಆಫ್‌ಲೈನ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ ಬೆಂಗಳೂರು ಕಚೇರಿಯ ಅಧಿಕಾರಿಗಳು ದೇಶದ ಹಲವು ಕಡೆಗಳಲ್ಲಿ ಅಕ್ರಮ ಶೋಧ ನಡೆಸಿದ್ದರು. ಆ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿ ಹಲವು ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿತ್ತು ಎಂದು ಇ.ಡಿ.ಹೇಳಿಕೊಂಡಿದೆ.
ಶೋಧದ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ ನಾಲ್ಕು ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಫ್ತಿ ಮಾಡಲಾಗಿದೆ. ಇದರ ಜೊತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್‌ಗಳನ್ನು ಜಫ್ತಿ ಮಾಡಲಾಗಿದೆ. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ