ರಾಹುಲ್ ಗಾಂಧಿ ಶ್ರೀರಾಮನ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದ ನಾನಾ ಪಟೋಲೆ ; ಇದು “ಅತಿರೇಕದ ಚಮಚಾಗಿರಿ” ಎಂದ ಬಿಜೆಪಿ

ನವದೆಹಲಿ : ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಸಿರುವುದು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪಟೋಲೆ ಅವರ ಈ ಹೇಳಿಕೆಯನ್ನು ಬಿಜೆಪಿ “ಅತಿರೇಕದ ಚಮಚಾಗಿರಿ” (Sycophancy Pro Max) ಎಂದು ಟೀಕಿಸಿದೆ.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ನಂತರ ರಾಹುಲ್ ಗಾಂಧಿ ಅವರು ಅಲ್ಲಿಗೆ ಭೇಟಿ ನೀಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾನಾ ಪಟೋಲೆ, “ರಾಹುಲ್ ಗಾಂಧಿ ಅವರು ಶ್ರೀರಾಮನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಂದು ತುಳಿತಕ್ಕೊಳಗಾದವರಿಗೆ ಮತ್ತು ವಂಚಿತರಿಗೆ ನ್ಯಾಯ ಕೊಡಿಸಲು ಶ್ರೀರಾಮ ಯಾವ ಪಾತ್ರ ವಹಿಸಿದ್ದನೋ, ಅದೇ ಕೆಲಸವನ್ನು ಇಂದು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

“ನಾನು ಅವರನ್ನು ದೇವರಿಗೆ ಸಮಾನ ಎಂದು ಹೇಳುತ್ತಿಲ್ಲ; ದೇವರು ದೇವರೇ, ನಾವು ಮನುಷ್ಯರು. ಆದರೆ, ರಾಹುಲ್ ಗಾಂಧಿ ಶೋಷಿತರಿಗಾಗಿ, ರೈತರಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತ್ತು ‘ರಾಮ ರಾಜ್ಯ’ದ ಪರಿಕಲ್ಪನೆಗಾಗಿ ಶ್ರಮಿಸುತ್ತಿದ್ದಾರೆ ಎನ್ನುವುದರಲ್ಲಿ ತಪ್ಪೇನಿಲ್ಲ. ರಾಹುಲ್ ಗಾಂಧಿ ಅಯೋಧ್ಯೆಗೆ ಹೋದಾಗ ಖಂಡಿತವಾಗಿಯೂ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಅಂದು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ರಾಮ ಮಂದಿರದ ಬಾಗಿಲು ತೆರೆಸಿದ್ದರು” ಎಂದು ಪಟೋಲೆ ನೆನಪಿಸಿದರು.

ಬಿಜೆಪಿ ವಾಗ್ದಾಳಿ
ಪಟೋಲೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಶಹಜಾದ್ ಪೂನವಾಲ, “ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮದ ನಂಬಿಕೆಗಳಿಗೆ ಅವಮಾನ ಮಾಡುತ್ತಿದೆ. ಈ ಹಿಂದೆ ರಾಮ ಮಂದಿರವನ್ನು ವಿರೋಧಿಸಿದ್ದ ಕಾಂಗ್ರೆಸ್, ಈಗ ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸುವ ಮೂಲಕ ಚಮಚಾಗಿರಿಯ ಪರಮಾವಧಿಯನ್ನು ಪ್ರದರ್ಶಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಮಾತನಾಡಿ, “ಇದು ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ಕ್ಷಮಿಸಲಾಗದ ಅಪರಾಧ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಲೇವಡಿ ಮಾಡಿದ್ದ ರಾಹುಲ್ ಗಾಂಧಿ ಅವರು ಇದುವರೆಗೆ ಮಂದಿರಕ್ಕೆ ಭೇಟಿ ನೀಡದಿರುವುದು ಯಾಕೆ?” ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement