
ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾದಲ್ಲಿ ವಿಚಿತ್ರ ಹಾಗೂ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. ಮನೆಯೊಂದಕ್ಕೆ ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ಎಕ್ಸಾಸ್ಟ್ ಫ್ಯಾನ್ ಅಳವಡಿಸುವ ರಂಧ್ರದಲ್ಲಿ ಸಿಲುಕಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಕೋಟಾ ನಿವಾಸಿ ಸುಭಾಷಕುಮಾರ ರಾವತ್ ಅವರು ತಮ್ಮ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಭಾನುವಾರ ರಾತ್ರಿ ಮನೆಗೆ ಮರಳಿದ್ದರು. ಅವರು ಮನೆಗೆ ಬಂದಾಗ ಈ ದೃಶ್ಯ ಕಂಡು ದಂಗಾಗಿದ್ದಾರೆ. ಅವರ ಮನೆಯ ಎಕ್ಸಾಸ್ಟ್ ಫ್ಯಾನ್ ರಂಧ್ರದಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡಿದ್ದ. ಆತನ ತಲೆ ಮತ್ತು ಕೈಗಳು ಮನೆಯ ಒಳಗಿದ್ದರೆ, ಕಾಲುಗಳು ಹೊರಗೆ ಗಾಳಿಯಲ್ಲಿ ತೂಗಾಡುತ್ತಿದ್ದವು. ಸುಮಾರು 10 ಅಡಿ ಎತ್ತರದ ಗೋಡೆಯಲ್ಲಿ ಸಿಲುಕಿದ್ದ ಆತನನ್ನು ಕಂಡು ದಂಪತಿ ಜೋರಾಗಿ ಕಿರುಚಾಡಿದ್ದಾರೆ.

ತಕ್ಷಣವೇ ಸಾವರಿಸಿಕೊಂಡ ರಾವತ್ ದಂಪತಿಗಳು ಆತನನ್ನು ಯಾರೆಂದು ಪ್ರಶ್ನಿಸಿದಾಗ, ಆತ ತಾನೊಬ್ಬ ‘ಕಳ್ಳ’ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಅಲ್ಲಿಯೂ ಆತ ತನ್ನ ಚಾಳಿಯನ್ನು ಬಿಡದೆ, ಹೊರಗೆ ತನ್ನ ಸಹಚರರಿದ್ದಾರೆ ಮತ್ತು ತನ್ನನ್ನು ಬಿಡದಿದ್ದರೆ ತೊಂದರೆ ನೀಡುವುದಾಗಿ ದಂಪತಿಗೆ ಬೆದರಿಕೆ ಹಾಕಿದ್ದಾನೆ.
ರಾವತ್ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸ ಪಟ್ಟು ಆತನನ್ನು ಹೊರತೆಗೆದಿದ್ದಾರೆ.
ಒಬ್ಬ ಪೊಲೀಸ್ ಪೇದೆ ಹೊರಗಿನಿಂದ ದೂಡಿದರೆ, ಇಬ್ಬರು ಒಳಗಿನಿಂದ ಆತನನ್ನು ಎಳೆಯುವ ಮೂಲಕ ರಂಧ್ರದಿಂದ ಮುಕ್ತಗೊಳಿಸಿದರು. ನೋವಿನಿಂದ ಕಿರುಚಾಡುತ್ತಿದ್ದ ಕಳ್ಳನನ್ನು ಕೊನೆಗೆ ಕೆಳಗೆ ಇಳಿಸಿ ವಶಕ್ಕೆ ಪಡೆಯಲಾಯಿತು.
ಕಳ್ಳ ಸಿಲುಕಿಕೊಂಡ ತಕ್ಷಣ ಆತನ ಸಹಚರರು ಅಲ್ಲಿಂದ ಪರಾರಿಯಾಗಿದ್ದಾರೆ. ಕಳ್ಳರು ಬಳಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರ ಮೇಲೆ ‘ಪೊಲೀಸ್’ ಎಂಬ ಸ್ಟಿಕ್ಕರ್ ಇರುವುದು ಪತ್ತೆಯಾಗಿದೆ. ಈ ಗ್ಯಾಂಗ್ ಪೊಲೀಸ್ ಸ್ಟಿಕ್ಕರ್ ಅನ್ನು ಹೇಗೆ ಪಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕಳ್ಳನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ