ದಾಖಲೆ ಬರೆದ ಪ್ರಧಾನಿ ಮೋದಿಯ ಪರೀಕ್ಷಾ ಪೆ ಚರ್ಚಾ- 2026ರ ನೋಂದಣಿ ; 4 ಕೋಟಿ ದಾಟಿದ ಅಭ್ಯರ್ಥಿಗಳ ಸಂಖ್ಯೆ…!

 ನವದೆಹಲಿ: ಈ ವರ್ಷದ ‘ಪರೀಕ್ಷಾ ಪೆ ಚರ್ಚಾ’ (PPC 2026) ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯು ಈಗಾಗಲೇ 4 ಕೋಟಿಯ ಗಡಿಯನ್ನು ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 7, 2026ರ ಸಂಜೆ 5:30ರ ವೇಳೆಗೆ ಒಟ್ಟು 4,03,12,346 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರ ವಿವರ ಹೀಗಿದೆ:
ವಿದ್ಯಾರ್ಥಿಗಳು: 3,75,00,671
ಶಿಕ್ಷಕರು: 22,89,974
ಪೋಷಕರು: 5,21,701
ನೋಂದಣಿಗೆ ಇನ್ನೂ ನಾಲ್ಕು ದಿನಗಳು ಬಾಕಿ ಇದ್ದು, ಜನವರಿ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಪ್ರಧಾನಿ ಮೋದಿಯವರ ಸಂದೇಶ
ಸಾಮಾಜಿಕ ಜಾಲತಾಣ ‘X’ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, “10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಹನ ನಡೆಸಲು ನಾನು ಉತ್ಸುಕನಾಗಿದ್ದೇನೆ. ಪರೀಕ್ಷೆಯ ಒತ್ತಡವನ್ನು ಮೆಟ್ಟಿ ನಿಲ್ಲುವುದು, ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವ ಕುರಿತು ನಾವು ಚರ್ಚಿಸಲಿದ್ದೇವೆ,” ಎಂದು ತಿಳಿಸಿದ್ದಾರೆ. ಅಲ್ಲದೆ, ಇತರರಿಗೆ ಸ್ಫೂರ್ತಿಯಾಗುವಂತಹ ಪ್ರಶ್ನೆ ಮತ್ತು ಅನುಭವಗಳನ್ನು ಹಂಚಿಕೊಳ್ಳುವಂತೆ ಪರೀಕ್ಷಾ ವಾರಿಯರ್ಸ್‌ (#ExamWarriors) ಕರೆ ನೀಡಿದ್ದಾರೆ.
ಕಳೆದ ಬಾರಿಯ ದಾಖಲೆ ಬ್ರೇಕ್‌…
ಈ ವರ್ಷದ ನೋಂದಣಿ ಸಂಖ್ಯೆಯು ಈಗಾಗಲೇ ಕಳೆದ ವರ್ಷದ ದಾಖಲೆಯನ್ನು ಹಿಂದಿಕ್ಕಿದೆ. 2025ರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ 3.53 ಕೋಟಿ ಜನರು ನೋಂದಾಯಿಸಿಕೊಳ್ಳುವ ಮೂಲಕ, ಒಂದೇ ತಿಂಗಳಲ್ಲಿ ನಾಗರಿಕ ಸಹಭಾಗಿತ್ವದ ವೇದಿಕೆಯಲ್ಲಿ ಅತಿ ಹೆಚ್ಚು ಜನ ನೋಂದಾಯಿಸಿಕೊಂಡ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣವಾಗಿತ್ತು. ಈ ವರ್ಷ ಈಗಾಗಲೇ ಅದು ನಾಲ್ಕು ಕೋಟಿಯನ್ನು ದಾಟಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಆಸಕ್ತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅಧಿಕೃತ ಪೋರ್ಟಲ್ innovateindia1.mygov.in ಮೂಲಕ ನೋಂದಾಯಿಸಿಕೊಳ್ಳಬಹುದು. ಅರ್ಜಿದಾರರು ತಮ್ಮ ವರ್ಗವನ್ನು ಆಯ್ಕೆ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಮುಂದಿನ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಪ್ರಧಾನಿಯವರು ನೇರ ಸಂವಾದ ನಡೆಸಲಿದ್ದು, ಪರೀಕ್ಷಾ ತಯಾರಿ ಮತ್ತು ಮಾನಸಿಕ ಆರೋಗ್ಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement