10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸಿ ; ಇ-ಕಾಮರ್ಸ್ ವಿತರಣಾ ಕಂಪನಿಗಳಿಗೆ ಸರ್ಕಾರದ ಸೂಚನೆ

ನವದೆಹಲಿ:  ಇ-ಕಾಮರ್ಸ್ ಪ್ರಮುಖ ವಿತರಣಾ ಕಂಪನಿಗಳು ನೀಡುತ್ತಿದ್ದ ’10 ನಿಮಿಷಗಳಲ್ಲಿ ಡೆಲಿವರಿ’ ಎಂಬ ಪ್ರಚಾರವನ್ನು ಕೈಬಿಡುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ವಿವಿಧ ಇ-ಕಾಮರ್ಸ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ಡೆಲಿವರಿ ಪಾಲುದಾರರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.
 ಸರ್ಕಾರದ ಸೂಚನೆಯ ಬೆನ್ನಲ್ಲೇ ಬ್ಲಿಂಕಿಟ್ ಸಂಸ್ಥೆಯು ತನ್ನ ಹಳೆಯ ಟ್ಯಾಗ್‌ಲೈನ್ “10 ನಿಮಿಷಗಳಲ್ಲಿ 10,000 ಕ್ಕೂ ಹೆಚ್ಚು ಉತ್ಪನ್ನಗಳ ವಿತರಣೆ” ಎಂಬುದನ್ನು ಬದಲಿಸಿ, “ನಿಮ್ಮ ಮನೆ ಬಾಗಿಲಿಗೆ 30,000 ಕ್ಕೂ ಹೆಚ್ಚು ಉತ್ಪನ್ನಗಳ ವಿತರಣೆ” ಎಂದು ಪರಿಷ್ಕರಿಸಿದೆ.
ಜೊಮಾಟೊ, ಸ್ವಿಗ್ಗಿ, ಬ್ಲಿಂಕಿಟ್ ಮತ್ತು ಜೆಪ್ಟೋ ಸೇರಿದಂತೆ ಹಲವು ಅಗ್ರಿಗೇಟರ್‌ಗಳ ಕಾರ್ಯನಿರ್ವಾಹಕರೊಂದಿಗೆ ಸಚಿವರು ಮಾತುಕತೆ ನಡೆಸಿದರು. ಸಕಾಲಿಕ ವಿತರಣೆಯ ಒತ್ತಡದಿಂದ ಡೆಲಿವರಿ ಸಿಬ್ಬಂದಿ ಜೀವಕ್ಕೆ ಅಪಾಯವಾಗುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
 ಕೇವಲ 10 ನಿಮಿಷಗಳಲ್ಲಿ ಸಾಮಗ್ರಿ ತಲುಪಿಸುವ ಭರವಸೆಯು ರಸ್ತೆಯಲ್ಲಿ ಸಂಚರಿಸುವ ಡೆಲಿವರಿ ಬಾಯ್ಸ್ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂಬ ಬಗ್ಗೆ ದೇಶಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿದ್ದವು.
ಗಿಗ್ ಕಾರ್ಮಿಕರ ಪ್ರತಿಭಟನೆ ಮತ್ತು ಸರ್ಕಾರದ ಕ್ರಮ
ಡಿಸೆಂಬರ್ 25 ರಂದು ಗಿಗ್ ಕಾರ್ಮಿಕರ ಸಂಘಟನೆಗಳು ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಪ್ರತಿಭಟನೆ ನಡೆಸಿದ್ದವು. ಅವಾಸ್ತವಿಕ ಸಮಯದ ಗುರಿಗಳನ್ನು ಕೈಬಿಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ, ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯಲ್ಲಿ ಗಿಗ್ ಕಾರ್ಮಿಕರಿಗೂ ಕನಿಷ್ಠ ವೇತನ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಿದೆ.
ರಾಘವ್ ಚಡ್ಡಾ ಸ್ವಾಗತ
ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಟೀ ಶರ್ಟ್ ಅಥವಾ ಬ್ಯಾಗ್ ಮೇಲೆ ’10 ನಿಮಿಷ’ ಎಂದು ಮುದ್ರಿಸಿರುವುದು ಮತ್ತು ಗ್ರಾಹಕರ ಸ್ಕ್ರೀನ್ ಮೇಲೆ ಟೈಮರ್ ಓಡುತ್ತಿರುವುದು ಡೆಲಿವರಿ ರೈಡರ್‌ಗಳ ಮೇಲೆ ತೀವ್ರ ಒತ್ತಡ ಹೇರುತ್ತದೆ. ಸರ್ಕಾರದ ಈ ನಿರ್ಧಾರವು ಮಾನವೀಯತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿತ್ತು  ಎಂದು ಅವರು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement