
ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆಯುವತ್ತ ಸಾಗಿದೆ. ಒಟ್ಟು 227 ಸದಸ್ಯ ಬಲದ ಪಾಲಿಕೆಯಲ್ಲಿ ಮಹಾಯುತಿ 120 ಸ್ಥಾನಗಳಲ್ಲಿ ಮುಂದಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಮಹಾಯುತಿ ಮೈತ್ರಿಕೂಟ 120 ಸ್ಥಾನಗಳಲ್ಲಿ ಇದರಲ್ಲಿ ಬಿಜೆಪಿ ಏಕಾಂಗಿಯಾಗಿ 93 ಸ್ಥಾನಗಳನ್ನು ಗೆದ್ದಿದ್ದರೆ, ಮಿತ್ರಪಕ್ಷ ಶಿವಸೇನೆ 27 ಸ್ಥಾನಗಳಲ್ಲಿ ಜಯಗಳಿಸಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಕ್ಷಣದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ, ಬಿಜೆಪಿ 2017 ರಲ್ಲಿ ಗೆದ್ದಿದ್ದ ತನ್ನ ಹಿಂದೆ ಪಡೆದಿದ್ದ ಗರಿಷ್ಠ 82 ಸ್ಥಾನಗಳನ್ನು ಈ ಬಾರಿ ಮೀರಿಸಿದೆ. ಈ ಸಲ ಬಿಜೆಪಿ 93 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಹಾಯುತಿ ಮೈತ್ರಿಕೂಟವು ಸರಳ ಬಹುಮತಕ್ಕೆ ಬೇಕಾದ 114ರ ಸಂಖ್ಯೆಯನ್ನು ಆರಾಮವಾಗಿ ದಾಟಿದೆ.
ಶಿವಸೇನೆ (ಯುಬಿಟಿ) ಮೈತ್ರಿಕೂಟ ಒಟ್ಟು 73 ಸ್ಥಾನಗಳನ್ನು ಪಡೆದಿದೆ. ಇದರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 63 ಸ್ಥಾನಗಳನ್ನು ಗೆದ್ದುಕೊಂಡರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 10 ಸ್ಥಾನಗಳನ್ನು ಪಡೆದಿದೆ. ಇನ್ನು ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯಗಳಿಸಿದೆ ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಎನ್‌ಸಿಪಿ (ಅಜಿತ ಪವಾರ್ ಬಣ)ಗೆ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಈ ಭರ್ಜರಿ ಯಶಸ್ಸಿನ ಬಳಿಕ ಮತದಾರರಿಗೆ ಧನ್ಯವಾದ ಅರ್ಪಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇದೊಂದು “ಐತಿಹಾಸಿಕ ಮತ್ತು ದಾಖಲೆ ಮುರಿಯುವ ಜನಾದೇಶ” ಎಂದು ಬಣ್ಣಿಸಿದ್ದಾರೆ. ಮಹಾಯುತಿ ಸರ್ಕಾರದ ಆಡಳಿತದ ಮೇಲೆ ಜನರಿಟ್ಟಿರುವ ವಿಶ್ವಾಸಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದು ಅವರು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಕಾರ್ಯಸೂಚಿಗೆ ಸಂದ ಜಯವಿದು. ಮುಂಬೈ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಶೀಘ್ರದಲ್ಲೇ ಮಹಾಯುತಿಯ ಬಾವುಟ ಹಾರಲಿದೆ” ಎಂದು ಫಡ್ನವೀಸ್ ಘೋಷಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ