2026ರ ಟಿ20 ವಿಶ್ವಕಪ್ | ಭಾರತದಲ್ಲಿ ಆಡುವ ವಿಚಾರ ; ಬಾಂಗ್ಲಾದೇಶಕ್ಕೆ ಐಸಿಸಿ ಅಂತಿಮ ಗಡುವು

 ಮುಂಬೈ/ಢಾಕಾ : 2026ರ ಪುರುಷರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (BCB), ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಂತಿಮ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಭಾರತಕ್ಕೆ ಬರಲು ಒಪ್ಪಿಗೆ ಕುರಿತು ನಿರ್ಧಾರ ತಿಳಿಸುವ  ಕುರಿತು ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಜನೆವರಿ 21ರ ವರೆಗೆ ಸಮಯ ನೀಡಿದೆ. ಒಂದು ವೇಳೆ ಬಾಂಗ್ಲಾದೇಶ ನಿರಾಕರಿಸಿದರೆ, ಆ ತಂಡದ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗುವ ಬಗ್ಗೆ ತಿಳಿಸಲಾಗಿದೆ ಎನ್ನಲಾಗಿದೆ.
ಭಾರತದಲ್ಲಿ ಭದ್ರತಾ ಆತಂಕವಿದೆ ಎಂದು ಕಾರಣ ನೀಡಿರುವ ಬಾಂಗ್ಲಾದೇಶ, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದೆ. ಆದರೆ, ಭಾರತದಲ್ಲಿ ಯಾವುದೇ ನಿರ್ದಿಷ್ಟ ಭದ್ರತಾ ಬೆದರಿಕೆ ಇಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
 ಐರ್ಲೆಂಡ್ ತಂಡ ಹಾಗೂ ತನ್ನ ತಂಡದ ಗುಂಪುಗಳನ್ನು ಬದಲಾಯಿಸುವ ಬಾಂಗ್ಲಾದೇಶದ ಪ್ರಸ್ತಾವನೆಯನ್ನೂ ಐಸಿಸಿ ತಿರಸ್ಕರಿಸಿದೆ.ಬಾಂಗ್ಲಾದೇಶವು ಫೆಬ್ರವರಿ 7 ರಿಂದ ಕೋಲ್ಕತ್ತಾದಲ್ಲಿ ತಮ್ಮ ಗುಂಪು ಹಂತದ ಮೂರು ಪಂದ್ಯಗಳನ್ನು ಮತ್ತು ಮುಂಬೈನಲ್ಲಿ ನಾಲ್ಕನೇ ಪಂದ್ಯವನ್ನು ಆಡಲಿದೆ.
ವಿವಾದದ ಹಿನ್ನೆಲೆ ಏನು?
ವರದಿಗಳ ಪ್ರಕಾರ, ಈ ವಿವಾದಕ್ಕೆ ಮುಖ್ಯ ಕಾರಣ ಐಪಿಎಲ್ 2026. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಬಿಸಿಸಿಐ ಸೂಚಿಸಿತ್ತು.  ಇದರಿಂದ ಕೆರಳಿದ ಬಾಂಗ್ಲಾದೇಶ ಮಂಡಳಿಯು ವಿಶ್ವಕಪ್ ಆಡಲು ಭಾರತಕ್ಕೆ ಬರಲು ನಿರಾಕರಿಸುತ್ತಿದೆ ಎಂದು ಹೇಳಲಾಗಿದೆ.
 ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಅಲ್ಲಿನ ಮಾಜಿ ಆಟಗಾರರಿಂದಲೇ ವಿರೋಧ ವ್ಯಕ್ತವಾಗಿದೆ. ಅಲ್ಲದೆ, “ವಿಶ್ವಕಪ್ ಆಡದಿದ್ದರೆ ನಮಗೆ ಹಣದ ನಷ್ಟವಿಲ್ಲ ಮತ್ತು ಆಟಗಾರರಿಗೂ ಪರಿಹಾರ ನೀಡುವುದಿಲ್ಲ” ಎಂಬ ಮಂಡಳಿಯ ಅಧಿಕಾರಿಯೊಬ್ಬರ ಹೇಳಿಕೆಯು ಆಟಗಾರರ ಮುಷ್ಕರಕ್ಕೂ ಕಾರಣವಾಗಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement