ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರ ನಿರಾಕರಣೆ : ಸರ್ಕಾರದಿಂದ ಮನವೊಲಿಸುವ ಯತ್ನ

ಬೆಂಗಳೂರು: ಜನವರಿ 22 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ.
ರಾಜ್ಯಪಾಲರ ಈ ಅನಿರೀಕ್ಷಿತ ನಿರ್ಧಾರದ ಬೆನ್ನಲ್ಲೇ, ರಾಜ್ಯ ಸರ್ಕಾರವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದೆ. ರಾಜ್ಯಪಾಲರ ಈ ನಿರ್ಧಾರಕ್ಕೆ ನಿಖರವಾದ ಕಾರಣಗಳು ಅಧಿಕೃತವಾಗಿ ಇನ್ನು ಬಹಿರಂಗವಾಗಿಲ್ಲ.
ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭಾಷಣದ ಕರಡಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇರಬಹುದಾದ ಕೆಲವು ಉಲ್ಲೇಖಗಳೇ ರಾಜ್ಯಪಾಲರ ಈ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಮೂಲಗಳು ಸೂಚಿಸಿವೆ.
ರಾಜಭವನಕ್ಕೆ ಕಾನೂನು ಸಚಿವರ ನಿಯೋಗ
ಈ ಬೆಳವಣಿಗೆಯ ಬೆನ್ನಲ್ಲೇ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಎಚ್.ಕೆ. ಪಾಟೀಲ, “ನಾಳಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು ನಿರಾಕರಿಸಿರುವ ಹಿನ್ನೆಲೆಯಲ್ಲಿ, ನಮ್ಮ ನಿಯೋಗವು ಅವರನ್ನು ಭೇಟಿಯಾಗಿ ಚರ್ಚಿಸಲಿದೆ,” ಎಂದು ತಿಳಿಸಿದ್ದಾರೆ.
ಇದೇ ರೀತಿಯ ಘಟನೆಗಳು ಇತ್ತೀಚೆಗೆ ಕೇರಳ ಮತ್ತು ತಮಿಳುನಾಡಿನಲ್ಲಿಯೂ ಕಂಡುಬಂದಿದ್ದು, ಅಲ್ಲಿನ ರಾಜ್ಯಪಾಲರು ಮತ್ತು ಬಿಜೆಪಿೇತರ ಸರ್ಕಾರಗಳ ನಡುವೆ ಭಾಷಣದ ವಿಚಾರವಾಗಿ ಸಂಘರ್ಷ ಉಂಟಾಗಿತ್ತು.
ವಿಧಾನಮಂಡಲದಲ್ಲಿ ಭಾರಿ ಹೈಡ್ರಾಮಾ ಸಾಧ್ಯತೆ
ಜನವರಿ 22 ರಿಂದ 31 ರವರೆಗೆ ನಡೆಯಲಿರುವ ಈ ಅಧಿವೇಶನವು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವಿನ ಭಾರಿ ಸಂಘರ್ಷಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಪ್ರಮುಖವಾಗಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ರದ್ದುಗೊಳಿಸಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದೆ.
ಕೇಂದ್ರದ ಹೊಸ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್’ (VB-G RAM G) ಕಾಯ್ದೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಲಿದೆ. ಈ ಹೊಸ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರದಿರಲು ಸಚಿವ ಸಂಪುಟ ಈಗಾಗಲೇ ತೀರ್ಮಾನಿಸಿದ್ದು, ಇದನ್ನು ಕಾನೂನಾತ್ಮಕವಾಗಿ ಎದುರಿಸಲು ನಿರ್ಧರಿಸಿದೆ
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement