ಬೆಂಗಳೂರು : ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ದರೋಡೆ ಪ್ರಕರಣದ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ ಎಂದು ವರದಿಯಾಗಿದೆ. ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಖಾಸಗಿ ನಗದು ನಿರ್ವಹಣಾ ಸಂಸ್ಥೆಯಾದ ಹಿಟಾಚಿ ಕಂಪನಿಯ ಸಿಬ್ಬಂದಿಯೇ ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾಸಗಿ ಪೇಮೆಂಟ್ ಸರ್ವೀಸ್ ಸಂಸ್ಥೆಯು ಕೆಲವು ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ಜಮಾ ಮಾಡುವ ಹೊಣೆ ಹೊತ್ತಿತ್ತು. ಕೋರಮಂಗಲದ ಬ್ಯಾಂಕ್‌ಗಳಿಂದ ನಗದು ಪಡೆದು ಎಟಿಎಂಗಳಿಗೆ ಒಂದು ಕೋಟಿಗೂ ಅಧಿಕ ಹಣವನ್ನು ತುಂಬುವ ಜವಾಬ್ದಾರಿಯನ್ನು ಎರಡು ಪ್ರತ್ಯೇಕ ತಂಡಗಳಿಗೆ ಕೆಲಸ ವಹಿಸಿತ್ತು ಎನ್ನಲಾಗಿದೆ. ಆದರೆ, ಈ ತಂಡಗಳು ಎಟಿಎಂಗಳಿಗೆ ಹಣ ಹಾಕುವ ಬದಲು ಹಣದೊಂದಿಗೆ ನಾಪತ್ತೆಯಾಗಿವೆಎಂದು ಆರೋಪಿಸಲಾಗಿದ್ದು, ಒಂದು ತಂಡವು ಸುಮಾರು 57 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರೆ, ಮತ್ತೊಂದು ತಂಡವು ಸುಮಾರು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದೆ ಎನ್ನಲಾಗಿದೆ. ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ಬಳಿಕ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಂಪನಿ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು
ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ