ಬೆಂಗಳೂರು: ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ (84 ವರ್ಷ) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಎಚ್.ವಿ ಅನಂತ ಸುಬ್ಬರಾವ್ ಬುಧವಾರ (ಜ.28) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅನಂತ್ ಸುಬ್ಬರಾವ್ ಅವರಿಗೆ ಬೆಂಗಳೂರಿನ ತಮ್ಮ ಮನೆಯಲ್ಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಅನಂತ ಸುಬ್ಬರಾವ್ ಅವರು ಭಾರತೀಯ ಜೀವ ವಿಮಾ ನಿಗಮದ (LIC) ಮೂಲಕ ಕಾರ್ಮಿಕ ಚಳವಳಿಗೆ ಪಾದಾರ್ಪಣೆ ಮಾಡಿದ್ದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ಬರಾವ್ ಅವರು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ಸಾರಿಗೆ ನೌಕರರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ (Arrears) ಪಾವತಿ ಮತ್ತು ನಾಲ್ಕು ಸಾರಿಗೆ ನಿಗಮಗಳ ವಿಲೀನಕ್ಕಾಗಿ ನಿರಂತರವಾಗಿ ಧ್ವನಿ ಎತ್ತಿ ಹೋರಾಡಿದ್ದರು. ಕಾರ್ಮಿಕರ ಹಕ್ಕುಗಳ ಪರವಾಗಿ ರಾಜಿ ಮಾಡಿಕೊಳ್ಳದ ಹೋರಾಟಗಾರರು ಎಂದು ಹೆಸರುವಾಸಿಯಾಗಿದ್ದರು. ಅವರು ಇಬ್ಬರು ಹೆಣ್ಣುಮಕ್ಕಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ